ಮೈಸೂರಿನಲ್ಲಿ ಗುಂಪುಮನೆಗೆ ಮತ್ತೆ ಡಿಮಾಂಡ್ ಸರ್ವೇ

muda
Published on

ಸದೇಶ್ ಕಾರ್ಮಾಡ್ ಮೈಸೂರು
ನನೆಗುದಿಗೆ ಬಿದ್ದಿದ್ದ ‘ಗುಂಪು ಮನೆ’ ಯೋಜನೆಗೆ ಮರು ಚಾಲನೆ ನೀಡಲು ನಿರ್ಧರಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಇದಕೋಸ್ಕರ ಮತ್ತೊಮ್ಮೆ ಡಿಮಾಂಡ್ ಸರ್ವೇ ನಡೆಸಲು ಸಿದ್ಧತೆ ಕೈಗೊಂಡಿದೆ.

ಮುಡಾ ನಿವೇಶನ ಹಂಚಿಕೆ, ಗುಂಪು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಮಾಂಡ್ ಸರ್ವೇ ಕೈಗೊಂಡ ಸಂದರ್ಭ ಸಾವಿರಾರು ಅರ್ಜಿಗಳು ಸ್ವೀಕೃತವಾಗುವುದು ಸಹಜ. ಖರೀದಿಯ ಆಸಕ್ತಿ ಹೊಂದಿಲ್ಲದೆ ಇದ್ದರೂ ಸಾಕಷ್ಟು ಜನರು ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಮನೆಯ ಅವಶ್ಯಕತೆ ಇರುವ ನೈಜ ಫಲಾನುಭವಿಗಳನ್ನು ಗುರುತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಡಿಮಾಂಡ್ ಸರ್ವೇಗೆ ಅರ್ಜಿ ಸಲ್ಲಿಸುವವರು ಅರ್ಜಿಯ ಜತೆಗೆ 1 ಲಕ್ಷ ರೂ. ಜಮೆ ಮಾಡಬೇಕು ಎಂಬ ಷರತ್ತನ್ನು ವಿಧಿಸಲು ಮುಡಾ ತೀರ್ಮಾನಿಸಿದೆ. ಸದ್ಯದ ಲ್ಲಿಯೇ ಡಿಮಾಂಡ್ ಸರ್ವೇಗೆ ಮುಡಾ ಚಾಲನೆ ನೀಡಲಿದೆ. 1 ಲಕ್ಷ ರೂ. ದೊಡ್ಡ ಮೊತ್ತವಾಗಿರುವ ಹಿನ್ನೆಲೆಯಲ್ಲಿ ಗುಂಪು ಮನೆಯಲ್ಲಿ ಫ್ಲಾಟ್ ಖರೀದಿಸಲು ಆಸಕ್ತಿ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸುತ್ತಾರೆ ಎಂಬುದು ಮುಡಾದ ಲೆಕ್ಕಾಚಾರವಾಗಿದೆ.

ಎಲ್ಲಿ ನಿರ್ಮಾಣ?

ವಿಜಯನಗರ ಬಳಿಯ ಬಸವನಹಳ್ಳಿಯಲ್ಲಿ ಗುಂಪು ಮನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಒಟ್ಟು 4 ಎಕರೆ ಜಾಗದಲ್ಲಿ ಗುಂಪು ಮನೆ ತಲೆ ಎತ್ತಲಿದೆ. ಒಟ್ಟು 14 ಫ್ಲೋರ್‌ನ ಮೂರು ಟವರ್‌ಗಳು ನಿರ್ಮಾಣಗೊಳ್ಳಲಿದ್ದು, ಒಂದು ಟವರ್‌ನಲ್ಲಿ 212, ಉಳಿದ ಎರಡು ಟವರ್‌ನಲ್ಲಿ 248 ಫ್ಲಾಟ್‌ಗಳು ನಿರ್ಮಾಣಗೊಳ್ಳಲಿದ್ದು, ಎರಡು ಬೆಡ್‌ರೂಂನ ಫ್ಲಾಟ್‌ಗೆ 35 ಲಕ್ಷ ರೂ.ವೆಚ್ಚವಾಗುವ ನಿರೀಕ್ಷೆ ಇದೆ. ಈ ಯೋಜನೆ ಕಾರ್ಯಗತಗೊಂಡ ನಂತರ ಹಿನಕಲ್‌ನಲ್ಲಿ 8 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಗುಂಪು ಮನೆ ನಿರ್ಮಾಣ ಮಾಡಲು ಮುಡಾ ಯೋಜನೆ ರೂಪಿಸಿದೆ.

ಮನೆಗಳಿಗೆ ಬೇಡಿಕೆ

ಮೈಸೂರನ್ನು ನಿವೃತ್ತರ ಸ್ವರ್ಗ ಎಂದು ಕರೆಯಲಾಗುತ್ತದೆ. ನಿವೃತ್ತಿಯ ನಂತರ ಬಹುತೇಕರು ಮೈಸೂರಿನಲ್ಲಿ ನೆಲೆಸಲು ಬಯಸುತ್ತಾರೆ. ಹೀಗಾಗಿ ಮೈಸೂರಿನಲ್ಲಿ ನಿವೇಶನ ಹಾಗೂ ಗುಂಪು ಮನೆಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಮುಡಾ ನಿರ್ಮಾಣ ಮಾಡುವ ಬಡಾವಣೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಚ್.ವಿ. ರಾಜೀವ್ ಮುಡಾ ಅಧ್ಯಕ್ಷರಾಗಿದ್ದ ಸಂದರ್ಭ ಗುಂಪು ಮನೆ ನಿರ್ಮಾಣಕ್ಕೆ ವಿಜಯನಗರ, ದಟ್ಟಗಳ್ಳಿಯಲ್ಲಿ ಜಾಗ ಗುರುತಿಸಿ ಡಿಮಾಂಡ್ ಸರ್ವೇ ನಡೆಸಲಾಗಿತ್ತು. ಆ ಸಂದರ್ಭ 35 ಸಾವಿರ ಅರ್ಜಿಗಳು ಸ್ವೀಕೃತವಾಗಿತ್ತು. ಈ ಯೋಜನೆ ಅನುಷ್ಠಾನಕ್ಕೆ ಮುಡಾ 2022-23ನೇ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಕಾಯ್ದಿರಿಸಿದೆ. ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಸರ್ಕಾರವೂ ಗುಂಪು ಮನೆ ನಿರ್ಮಾಣಕ್ಕೆ ಆಸಕ್ತಿಯನ್ನು ತೋರಿದೆ.

ಮೈಸೂರಿನಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಮುಡಾಕ್ಕೆ ನಿವೇಶನ ಕೋರಿ 1 ಲಕ್ಷ ಜನರು ಅರ್ಜಿ ಸಲ್ಲಿಸಿ 20 ವರ್ಷಗಳಿಂದ ಕಾಯುತ್ತಿದ್ದಾರೆ. ಜಾಗದ ಕೊರತೆಯಿಂದಾಗಿ ಮುಡಾ ಬಡಾವಣೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಬಲ್ಲಹಳ್ಳಿ ಉಪ ನಗರ ನಿರ್ಮಾಣ ಮಾಡುವ ಯೋಜನೆಯನ್ನು ಕಾರಣಾಂತರಗಳಿಂದ ಕೈ ಬಿಡಲಾಯಿತು. ಹೀಗಾಗಿ ಸದ್ಯಕ್ಕಂತು ಮುಡಾದಿಂದ ನಿವೇಶನ ಪಡೆಯುವುದು ಕನಸಿನ ಮಾತಾಗಿದೆ. ಹೀಗಾಗಿ ಗುಂಪು ಮನೆಗಳ ಮೂಲಕ ಜನರಿಗೆ ಕಡಿಮೆ ದರದಲ್ಲಿ ಮನೆಗಳನ್ನು ನೀಡುವ ಉದ್ದೇಶವನ್ನು ಮುಡಾ ಹೊಂದಿದೆ. ಇದಕ್ಕೆ ನಗರದ ಜನರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಕಾದು ನೋಡಬೇಕಾಗಿದೆ.

ನಗರದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಗುಂಪು ಮನೆ ನಿರ್ಮಾಣ ಮಾಡಿ ನೀಡಲು ಮುಡಾ ಸಿದ್ಧತೆ ಕೈಗೊಂಡಿದೆ. ಇದಕೋಸ್ಕರ ಡಿಮಾಂಡ್ ಸರ್ವೇ ಕೈಗೊಳ್ಳಲು ಮುಂದಾಗಿದ್ದೇವೆ. ಡಿಮಾಂಡ್ ಸರ್ವೇಗೆ ಅರ್ಜಿ ಸಲ್ಲಿಸುವವರು ಅರ್ಜಿಯೊಂದಿಗೆ 1 ಲಕ್ಷ ರೂ. ಪಾವತಿಸಬೇಕು. ನಿಜವಾಗಿಯೂ ಎಷ್ಟು ಜನರಿಗೆ ಮನೆಯ ಅವಶ್ಯಕತೆ ಎಂದು ತಿಳಿಯುವ ಸಲುವಾಗಿ 1 ಲಕ್ಷ ರೂ. ನಿಗದಿ ಪಡಿಸ ಲಾಗಿದೆ. ವಿಜಯನಗರ ಬಳಿಯ ಬಸವನಹಳ್ಳಿಯಲ್ಲಿ ಗುಂಪು ಮನೆ ನಿರ್ಮಾಣ ಮಾಡಲಾಗುವುದು.
ಜಿ.ಟಿ. ದಿನೇಶ್ ಕುಮಾರ್, ಮುಡಾ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net