ನೂತನ ಕಾಯ್ದೆ ವಾಪಸ್ ಪಡೆಯಲು ಲಾರಿ ಚಾಲಕರು, ಮಾಲೀಕರ ಆಗ್ರಹ

16
Published on

ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ವಾಹನ ಕಾಯ್ದೆ ಜಾರಿ ವಿರೋಧಿಸಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದಿಂದ ಮುಷ್ಕರ ನಡೆಯಿತು.
ನಗರದ ರೇಸ್‌ಕೋರ್ಸ್ ಬಳಿ ಇರುವ ಒಕ್ಕೂಟದ ಕಚೇರಿ ಆವರಣದಲ್ಲಿ ಸಭೆ ಸೇರಿದ ಲಾರಿ ಮಾಲೀಕರು, ಚಾಲಕರು, ನೂತನ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ, ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯನ್ನು ಏ.1ರಿಂದ ಅನ್ವಯವಾಗುವಂತೆ ಜಾರಿ ಮಾಡಲು ಮುಂದಾಗಿದೆ. ಈ ಕಾನೂನಿನಿಂದ ವಾಹನ ಉದ್ಯಮ ಹಲವು ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ. ವಾಹನ ಚಾಲಕರು ಅಪಘಾತ ಮಾಡಿ ಸ್ಥಳದಲ್ಲಿ ಇಲ್ಲದೆ ತೆರಳಿದರೆ ಚಾಲಕನಿಗೆ 10 ವರ್ಷದವರೆಗೆ ಶಿಕ್ಷೆ, 7 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಈ ಉದ್ದೇಶಿತ ಕಾನೂನಿನಿಂದ ವಾಹನ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದರು.
ಒಂದು ವೇಳೆ ಕಾಯ್ದೆ ಜಾರಿಗೆ ಬಂದರೆ ಚಾಲಕರು ತಮ್ಮ ಕರ್ತವ್ಯ ನಿರ್ವಹಣೆ ವೇಳೆ ಅಪಘಾತವಾದರೆ ಕಾನೂನು ತೊಡಕುಗಳನ್ನು ಎದುರಿಸಲು ಸಾಧ್ಯವಾಗದೆ ವೃತ್ತಿಯನ್ನೇ ಬಿಟ್ಟು ಬೇರೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವಾಹನ ಉದ್ಯಮ ನಶಿಸಿಹೋಗಬಹುದಾದ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಹನ ಉದ್ಯಮವನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಯನ್ನು ಪರಿಶೀಲಿಸಿ, ಪ್ರಸ್ತುತವಿರುವ ಕಾನೂನು ಮುಂದೆಯೂ ಅನ್ವಯವಾಗುವಂತೆ ಲಿಖಿತರೂಪದಲ್ಲಿ ಭರವಸೆ ನೀಡಬೇಕು. ಯಾವುದೇ ಕಾರಣಕ್ಕೂ ನೂತನ ಕಾಯ್ದೆ ಜಾರಿಗೆ ಬರಬಾರದು ಎಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಅಧ್ಯಕ್ಷ ಕೋದಂಡರಾಮ, ಉಪಾಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಮುಖಂಡರಾದ ಅಭಿಷೇಕ್, ಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net