ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹ

IMG20241121202750.jpg
Published on

ಬೆಳಗಾವಿ: ಅಪಾರ ವನಸ್ಪತಿ ಖನಿಜ ಇರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬೆಳಗಾವಿ ಪ್ರಾದೇಶಿಕ ಕಚೇರಿ ಎದುರು ಗುರುವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಡೋಣಿ- ಗದಗ ನಂದಿವೇರಿ ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು, ಕಪ್ಪತ್ತಗುಡ್ಡ ಉಳಿಸಿ, ಕಪ್ಪತಗುಡ್ಡ ನಮ್ಮದು ನಮ್ಮದು ಎಂದು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಮ್ಲಜನಕದ ಖಜಾನೆ, ಜೀವವೈವಿಧ್ಯಗಳ ತಾಣ ಕಪ್ಪತಗುಡ್ಡ ಉಳಿವಿಗಾಗಿ ಮತ್ತೆ ಹೋರಾಟ ಆರಂಭವಾಗಿದೆ. ಕಪ್ಪತಗುಡ್ಡವು 80 ಸಾವಿರ ಎಕರೆ ಪ್ರದೇಶ ಹೊಂದಿದ್ದು, ಮುಂಡರಗಿ-ಗದಗ-ಶಿರಹಟ್ಟಿ ತಾಲೂಕಿನಲ್ಲಿ ವ್ಯಾಪಿಸಿದೆ. ಆದರೆ, ಇಲ್ಲಿನ ವಾತಾವರಣ ಉತ್ತರ ಕರ್ನಾಟಕದ 15 ಜಿಲ್ಲೆಗಳ ವಾತಾವರಣದ ಸಮತೋಲತೆ ಕಾಯ್ದುಕೊಳ್ಳುತ್ತದೆ. ಆದರೆ, ರಾಜ್ಯ ಸರ್ಕಾರ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಗಣಿಗಾರಿಕೆ ಮಾಡುವುದನ್ನು ಕೈ ಬಿಡುವಂತೆ ನಿರ್ಣಯ ಕೈಗೊಳ್ಳುವಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಿವಕುಮಾರ ಸ್ವಾಮೀಜಿ ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ಕಪ್ಪತಗುಡ್ಡಕ್ಕೆ ಕೈ ಹಾಕಬಾರದು. ಗಣಿಗಾರಿಕೆಗೆ ಅವಕಾಶ ನೀಡದೇ ಗುಡ್ಡವನ್ನು ಉಳಿಸಿ, ಬೆಳೆಸಬೇಕು. ಈಗಾಗಲೇ ಬಳ್ಳಾರಿ ಮತ್ತು ಸಂಡೂರ ಗುಡ್ಡವನ್ನು ಕಳೆದುಕೊಂಡ ನೋವಿದೆ. ಈಗ ಕಪ್ಪತಗುಡ್ಡದಲ್ಲೂ ಅನ್ಯಾಯ ಆಗಲು ನಾವು ಬಿಡುವುದಿಲ್ಲ. 7 ಕೋಟಿ ಕನ್ನಡಿಗರು ಕಪ್ಪತಗುಡ್ಡದ ಪರವಿದ್ದು, ರಾಜ್ಯದ ಜನರನ್ನು ವಿರೋಧಿಸಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಹಿಂದೆ ಹೋರಾಟ ಮಾಡಿದ್ದಕ್ಕೆ ಈಗ ಕಪ್ಪತಗುಡ್ಡ ವನ್ಯಜೀವಿ ಧಾಮ ಆಗಿದೆ. ಹಾಗಾಗಿ, ಇದನ್ನು ಸಂಪೂರ್ಣವಾಗಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ರುದ್ರಣ್ಣ ಗುಳಗುಳಿ, ಶಂಕರ ಕುಂಬಿ, ಸರಸ್ವತಿ ಪೂಜಾರ, ಕೆ.ಎಚ್. ನಾಯಕ, ಆರ್.ಜಿ. ತಿಮ್ಮಾಪುರ, ಲಿನ್ನೆಟ್ ಡಿಸಿಲ್ವಾ, ಸಪ್ನಾ ಕರಬಶೆಟ್ಟರ್, ಪ್ರಮೀಳಾ ಜಕ್ಕನ್ನವರ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net