

ಮೈಸೂರು: ಈಗಾಗಲೇ ಬಾರ್‌ಗಳಿಂದ ಜನರಿಗೆ ತೊಂದರೆ ಆಗುತ್ತಿದ್ದು, ಮತ್ತೊಂದು ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬಜಾರ್ ರಸ್ತೆ ನಿವಾಸಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿದ್ದಾರ್ಥ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ದಲಿತ ಮಹಾಸಭಾ ನೇತೃತ್ವದಲ್ಲಿ ಧರಣಿ ನಡೆಸಿದ ನಿವಾಸಿಗಳು, ಎನ್.ಆರ್.ಮೊಹಲ್ಲಾದಲ್ಲಿ ಇರುವ ಶ್ರೀರಾಮ ವೈನ್‌ಸ್ಟೋರ್ ಅನ್ನು ಬಜಾರ್ ರಸ್ತೆಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಬಜಾರ್ ರಸ್ತೆಯಲ್ಲಿ ಈಗಾಗಲೇ ಎರಡು ವೈನ್‌ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಇವೆ. ಇವುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಮಹಿಳೆಯರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಸಮೀಪದಲ್ಲಿಯೇ ಆಸ್ಪತ್ರೆ, ಪ್ರಾರ್ಥನಾ ಮಂದಿರ ಇದ್ದು, ಏನಾದರೂ ತೊಂದರೆ ಆದರೆ ಸೂಕ್ಷ್ಮ ಪ್ರದೇಶವಾದ ಇಲ್ಲಿ ಹಿಂದು, ಮುಸ್ಲಿಂ ಗಲಭೆ ನಡೆಯುವ ಸಾಧ್ಯತೆ ಇದೆ ಎಂದು ದೂರಿದರು.
ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಇರಿಸುಮುರಿಸು ಉಂಟಾಗುತ್ತಿದೆ. ಈ ಮದ್ಯದಂಗಡಿಗಳು ಇರುವ ಜಾಗದಲ್ಲಿ 3 ಸಾವಿರಕ್ಕೂ ಹೆಚ್ಚು ದಲಿತ ಸಮುದಾಯದ ಜನರಿದ್ದು, ಹೆಚ್ಚು ಯುವಕರಿದ್ದಾರೆ. ಗಾರೆ ಕೆಲಸ, ಬಾರ್‌ಬೆಂಡಿಂಗ್, ಕೂಲಿ ಕಾರ್ಮಿಕರಾಗಿದ್ದು ಕುಡಿತದ ದಾಸರಾಗಿದ್ದಾರೆ ಎಂದು ಆರೋಪಿಸಿದರು.
ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಪಾಲಕರಿಗೆ ತೊಂದರೆಯಾಗುತ್ತಿದೆ. ಮತ್ತೆ ಮೂರನೇ ಅಂಗಡಿ ತೆರೆದರೆ ಮತ್ತಷ್ಟು ತೊಂದರೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್, ಮುಖಂಡರಾದ ಶಿವರುದ್ರ, ರವಿ, ಕುಮಾರ್, ವಿಶ್ವನಾಥ್ ಇತರರು ಇದ್ದರು.