ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಈಡೇರಿಲ್ಲ: ಸಾರಿಗೆ ನೌಕರರ ಕನವರಿಕೆ!

KSRTC vvani
Published on

ಬೆಂಗಳೂರು: ನಿತ್ಯ ಲಕ್ಷಾಂತರ ಜನರ ಸುರಕ್ಷಿತ ಪ್ರಯಾಣಕ್ಕಾಗಿ ಕಾರ್ಯ ನಿರ್ವಹಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಈವರೆಗೆ ಈಡೇರಿಲ್ಲ. ಹೀಗಾಗಿ 1.26 ಲಕ್ಷ ಸಿಬ್ಬಂದಿ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಾದ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಇಕೆಆರ್​ಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿಗಳು ನಷ್ಟದಲ್ಲಿರಲಿ ಲಾಭದಲ್ಲಿರಲಿ ಆ ನಿಗಮಕ್ಕಾಗಿ ಕೆಲಸ ಮಾಡುವ ನೌಕರರಿಗೆ ಮಾತ್ರ ಸರ್ಕಾರಿ ಸವಲತ್ತು ಸಿಗುತ್ತಿಲ್ಲ. ತಮ್ಮದೇ ವೇತನದಲ್ಲಿ ಕಡಿತಗೊಳ್ಳುವ ಭವಿಷ್ಯನಿಧಿ, ವಿಮಾ ಹಣ, ಹತ್ತಾರು ವರ್ಷ ನಿಗಮಗಳಿಗಾಗಿ ದುಡಿದವರಿಗೆ ನೀಡಬೇಕಾದ ಗ್ರಾಚ್ಯುಟಿ ಪಡೆಯಲು ನೌಕರರು ಕಷ್ಟಪಡಬೇಕಿದೆ. ಈ ಎಲ್ಲ ಕಷ್ಟಕ್ಕೂ ಪರಿಹಾರ ಎನ್ನುವಂತೆ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿಸಬೇಕೆಂಬ ಬೇಡಿಕೆಯನ್ನು ಈವರೆಗೆ ಸರ್ಕಾರ ಈಡೇರಿಸಿಲ್ಲ.

ವೇತನ ಕಡಿತದ ಹಣ ಸಿಗುತ್ತಿಲ್ಲ: ವೇತನ ಹೆಚ್ಚಳ ಇರಲಿ, ಸಾರಿಗೆ ನೌಕರರ ವೇತನದಲ್ಲಿ ಕಡಿತಗೊಳಿಸುವ ಮರಣ ನಿಧಿ, ಭವಿಷ್ಯ ನಿಧಿ, ವಿಮಾ ಮೊತ್ತ, ಸಹಕಾರ ಸಂಘದ ಮೊತ್ತಗಳನ್ನು ನಿಗಮಗಳು ಸರಿಯಾಗಿ ಪಾವತಿಸುತ್ತಿಲ್ಲ. ಭವಿಷ್ಯ ನಿಧಿ, ವಿಮಾ ಮೊತ್ತಗಳನ್ನು ಒಂದು ಅಥವಾ ಎರಡು ವರ್ಷಕ್ಕೊಮ್ಮೆ ಪಾವತಿಸಲಾಗುತ್ತಿದೆ. ಅದರಿಂದಾಗಿ ಸಾರಿಗೆ ನೌಕರರಿಗೆ ಸಿಗುವ ಬಡ್ಡಿಯ ಮೊತ್ತ ಹಾಗೂ ಇನ್ನಿತರ ಸೌಲಭ್ಯಗಳು ದೊರಕದಂತಾಗಿದೆ. ಒಂದು ವೇಳೆ ಸರ್ಕಾರಿ ನೌಕರರಾದರೆ ತಮ್ಮ ವೇತನದಲ್ಲಿ ಕಡಿತಗೊಳಿಸುವ ಹಣ ಸಮರ್ಪಕವಾಗಿ ಭರ್ತಿಯಾಗುತ್ತದೆ ಎಂಬುದು ಸಿಬ್ಬಂದಿ ವಾದ.

ಹತ್ತಾರು ವರ್ಷ ನಿಗಮಗಳಲ್ಲಿ ಕೆಲಸ

ಮಾಡಿ ನಿವೃತ್ತಿ ಹೊಂದುವ ನೌಕರರಿಗೆ ಸಮರ್ಪಕವಾಗಿ ಗ್ರಾ್ಯಚ್ಯುಟಿ ನೀಡುತ್ತಿಲ್ಲ. ಸದ್ಯ, ನಾಲ್ಕೂ ನಿಗಮಗಳಲ್ಲಿ 500ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಗ್ರಾ್ಯಚ್ಯುಟಿ ನೀಡುವುದು ಬಾಕಿ ಉಳಿದಿದೆ. ಇದರಿಂದಾಗಿ ನಿವೃತ್ತಿ ನಂತರವೂ ಅವರಿಗೆಲ್ಲ ಜೀವನದಲ್ಲಿ ನೆಮ್ಮದಿಯೇ ಇಲ್ಲವಾಗಿದೆ.

ವೈದ್ಯಕೀಯ ಸೌಲಭ್ಯವಿಲ್ಲ

ನಿಗಮಗಳ ನೌಕರರು ಮತ್ತು ಕುಟುಂಬಸ್ಥರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಕೆಲವೊಂದು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ನೌಕರರು ಅಥವಾ ಅವರ ಕುಟುಂಬದವರು ಚಿಕಿತ್ಸೆ ಪಡೆದಿದ್ದಕ್ಕೆ ಸಂಬಂಧಿಸಿದಂತೆ ನಿಗದಿತ ಸಂದರ್ಭದಲ್ಲಿ ಹಣ ಪಾವತಿಸದ ಕಾರಣ ಅನೇಕ ಆಸ್ಪತ್ರೆಗಳು ನೌಕರರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಜತೆಗೆ ಸಾರಿಗೆ ನಿಗಮಗಳೊಂದಿಗಿನ ಒಪ್ಪಂದವನ್ನೇ ಕಡಿದುಕೊಂಡಿವೆ. ಸರ್ಕಾರಿ ನೌಕರರಾದರೆ, ನೌಕರರ ಮತ್ತು ಕುಟುಂಬದವರ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರ ನಿಗದಿತ ವ್ಯವಸ್ಥೆ ಮಾಡಲಿದೆ. ಜತೆಗೆ ರಜೆ, ಡಿಪೋ ಮಟ್ಟದಲ್ಲಿನ ಕಿರುಕುಳಕ್ಕೂ ಬ್ರೇಕ್ ಬೀಳಲಿದೆ ಎಂಬ ನಂಬಿಕೆ ಸಾರಿಗೆ ನೌಕರರದ್ದಾಗಿದೆ.

ಬೇಡಿಕೆ ಏಕೆ?

ಸದ್ಯ ಸಾರಿಗೆ ನೌಕರರ ವೇತನ ಪ್ರಮಾಣ ತೀರಾ ಕಡಿಮೆಯಿದೆ. ವೇತನ ಆಯೋಗದ ಶಿಫಾರಸುಗಳ ಲಾಭ ಪಡೆಯುವ ಸರ್ಕಾರಿ ನೌಕರರಿಗೆ ಹೋಲಿಸಿದರೆ ಸಾರಿಗೆ ನೌಕರರ ವೇತನ ಶೇ.20ರಿಂದ 30 ಕಡಿಮೆಯಿದೆ. ಒಂದು ವೇಳೆ ಸರ್ಕಾರಿ ನೌಕರರನ್ನಾಗಿ ಮಾಡಿದರೆ, ಸಾರಿಗೆ ನೌಕರರಿಗೂ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳವಾಗಲಿದೆ. ಹಾಗಾಗಿಯೇ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ. ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸದ್ಯ, ನಿಗಮಗಳ ಅಧಿಕಾರಿಗಳು ನೌಕರ ಸಂಘಟನೆಗಳ ಮುಖಂಡರೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ವೇತನದ ಶೇ.4ರಿಂದ 12.5 ವೇತನ ಹೆಚ್ಚಳ ಮಾಡಲಾಗುತ್ತಿದೆ. ಅದಕ್ಕೆ ಸಮರ್ಪಕ ಮಾನದಂಡಗಳಿಲ್ಲ.

ಸಮಿತಿ ರಚನೆಯಾಗಿದೆ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಕುರಿತು ವರದಿ ನೀಡುವಂತೆ ಕೆಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಸಮಿತಿ ರಚಿಸಲಾಗಿದೆ. ಆದರೆ, ಈವರೆಗೆ ಸಮಿತಿಯಿಂದ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಸಮಿತಿಯು ಒಂದಾದರೂ ಸಭೆ ನಡೆಸಿರುವ ಮಾಹಿತಿಯೂ ಇಲ್ಲ ಎಂದು ಸಾರಿಗೆ ನೌಕರರು ಅಲವತ್ತುಕೊಂಡಿದ್ದಾರೆ.

ಎಷ್ಟು ಸಿಬ್ಬಂದಿ?

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಒಟ್ಟು 25 ಸಾವಿರ ಬಸ್​ಗಳಿವೆ. ಅವುಗಳಲ್ಲಿ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿ 1.26 ಲಕ್ಷ ನೌಕರರಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿಸುವ ಕುರಿತು ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ. ಈವರೆಗೆ ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಸರ್ಕಾರಿ ನೌಕರರಾದರೆ, ವೇತನ ಹೆಚ್ಚಳ ಸೇರಿ ಇನ್ನಿತರ ಸೌಲಭ್ಯಗಳು ದೊರೆಯಲಿವೆ. | ಆನಂದ್ ರಾಜ್ಯ ರಸ್ತೆ ನೌಕರರ ಫೆಡರೇಷನ್ (ಸಿಐಟಿಯು) ಜಂಟಿ ಕಾರ್ಯದರ್ಶಿ

ಗಿರೀಶ್ ಗರಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net