

ಮೈಸೂರು: ದಲಿತ ಮುಖ್ಯಮಂತ್ರಿ ಬೇಡಿಕೆಯನ್ನು ಸರ್ಕಾರದ ಮುಂದಿಡಬೇಕು ಎಂಬ ಒತ್ತಾಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಮ್ಮುಖದಲ್ಲಿ ದಲಿತ ನಾಯಕರುಗಳಿಂದ ವ್ಯಕ್ತವಾಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ದಲಿತ ಚಳವಳಿ ಮುಂದಿನ ಹಾದಿ ಕುರಿತು ಒಂದು ಅವಲೋಕನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ಹರಿಹರ ಆನಂದಸ್ವಾಮಿ ಅವರಿಗೆ ಆಯೋಜಿಸಿದ್ದ ಸನ್ಮಾನ ಸವಾರಂಭದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭ ದಲಿತ ಮುಖ್ಯಮಂತ್ರಿಯ ಕೂಗು ಕೇಳಿ ಬಂತು.
ಚಾಮರಾಜನಗರ ಜಿಲ್ಲೆಯ ದಲಿತ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಗಟ್ಟಿಯಾದ ನಾಯಕರಾಗಿದ್ದರಿಂದ ಅವರನ್ನು ಕಾಂಗ್ರೆಸ್‌ನಿಂದ ಓಡಿಸಲಾಯಿತು. ಆದರೆ, ನಿಮ್ಮನ್ನು (ಡಾ.ಎಚ್.ಸಿ. ಮಹದೇವಪ್ಪ) ಆ ರೀತಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಿಂತಿದ್ದೀರಿ, ಏಳೂವರೆ ವರ್ಷಗಳ ಕಾಲ ಅವರ ಜತೆಗೆ ಇದ್ದೀರಿ. ನೀವು ಎರಡೂವರೆ ವರ್ಷಗಳ ಕಾಲ ಸಿಎಂ ಕೊಡಿ ಅಂತ ಗಟ್ಟಿಯಾಗಿ ಕೇಳಿ, ನಿಮ್ಮ ಪರವಾಗಿ ಸಮುದಾಯ ಇದೆ ಎಂದು ಹೇಳಿದರು.
ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್ ಅವರಿಗೆ ಸಾಮರ್ಥ್ಯ ಇಲ್ಲ, ಪ್ರಿಯಾಂಕ್ ಖರ್ಗೆಗೆ ಇನ್ನೂ ವಯಸ್ಸು ಇದೆ. ಹಾಗಾಗಿ ಮಹದೇವಪ್ಪ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕ್ಲೈಂ ಮಾಡಬೇಕು, ನಿಮ್ಮ ಪರವಾಗಿ ನಾವಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯದಿಂದ ಬಂದಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ಇವರ ಮಾತಿಗೆ ಕಾರ್ಯಕ್ರಮದಲ್ಲಿದ್ದವರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದರು.
ಈ ಹಿಂದೆ ದಲಿತರು ಒಟ್ಟಾಗಿ ಮಾಡುತ್ತಿದ್ದರು. ಇದೀಗ ದಲಿತರು ಎಡ ಮತ್ತು ಬಲ ಎನ್ನುವಂತಾಗಿದೆ. ನಾವು ವಿರೋಧ ಪಕ್ಷದವರಂತೆ ಹೋರಾಟ ವಾಡಿಕೊಂಡು ಬಂದಿದ್ದೇವೆ. ಯಾರೇ ತಪ್ಪು ಮಾಡಿದರೂ ಖಂಡಿಸುತ್ತೇವೆ. ಅನ್ಯಾಯದ ವಿರುದ್ಧ ಚಳವಳಿಗಳು ಗಟ್ಟಿಯಾಗಬೇಕು ಅಂದರೆ ಮೊದಲು ನಾವು ಗಟ್ಟಿಯಾಗಬೇಕು ಎಂದರು.
ಚಿಂತಕ ಪ್ರೊ.ಡಿ. ಆನಂದ್ ಮಾತನಾಡಿ, ಒಂದು ಸರ್ಕಾರವನ್ನು ನಿಯಂತ್ರಿಸುವ ಮತ್ತು ಜಗತ್ತಿನ ಬಗ್ಗೆ ಮಾತನಾಡುವಂತಹ ಆರ್‌ಎಸ್‌ಎಸ್‌ನಂತೆ ದಲಿತ ಸಂಘಟನೆಗಳು ಬದಲಾಗಬೇಕು. ಹಳೆಯ ಕಾಯಿಲೆಗೆ ಹಳೆಯ ಔಷಧವನ್ನೇ ಬಳಸುವ ಬದಲಿಗೆ ಹೊಸ ಔಷಧವನ್ನು ಬಳಸಿಕೊಂಡು ಬದಲಾಗಬೇಕು ಎಂದು ಸಲಹೆ ನೀಡಿದರು.
ಆರ್‌ಎಸ್‌ಎಸ್ ಸಂಘಟನೆ ಸರ್ಕಾರದ ಹಣೆಬರಹವನ್ನು ಬದಲಿಸುವ ಮತ್ತು ನಿಯಂತ್ರಿಸುವಂತೆ ಸಾಮರ್ಥ್ಯ ಹೊಂದಿದೆ. ಅಂತಹದ್ದೆ ಶಕ್ತಿಯನ್ನು ದಲಿತ ಸಂಘಟನೆಗಳು ಬೆಳೆಸಿಕೊಳ್ಳಬೇಕು. ಸಂವಿಧಾನದಲ್ಲಿ ಜಾತ್ಯತೀತ ಪದ ಬಳಕೆ ಕುರಿತು ಆರ್‌ಎಸ್‌ಎಸ್ ಮುಖಂಡರು ಆಕ್ಷೇಪ ಎತ್ತಿದ್ದಾರೆ. ನಾವು ಜಾತ್ಯತೀತರು ಎನ್ನುವುದನ್ನು ಒಪ್ಪಿದ್ದೇವೆ. ಆದರೆ, ಇದನ್ನು ಸಹಿಸದವರು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಚಿಂತಕ ಪ್ರೊ.ಚಂದ್ರಶೇಖರ್ ಮಾತನಾಡಿ, ದಲಿತ ಚಳುವಳಿ ಕರ್ನಾಟಕದ ಮಟ್ಟಿಗೆ ಹಲವು ದೊಡ್ಡ ಬದಲಾವಣೆಗಳಿಗೆ ಕಾರಣವಾಯಿತು. ಒಂದು ಸರ್ಕಾರವನ್ನು ಬದಲಿಸುವ ಮಟ್ಟಿಗೆ ಬೆಳೆದಿದ್ದ ಸಂಘಟನೆ ಈಗ ಇರುವ ಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿದರು.
ದಲಿತ ಚಳವಳಿಯನ್ನು ಕಟ್ಟುವಾಗ ಅನೇಕರು ಶ್ರಮ ಪಟ್ಟಿದ್ದಾರೆ. ಇಂದು ಕಾಲ ಬದಲಾದಂತೆ ಚಳವಳಿ ಬದಲಾಗಿದೆ. ಅಂದು ನಿಸ್ವಾರ್ಥವಾಗಿ ಹೋರಾಟಕ್ಕೆ ಬರುತ್ತಿದ್ದರು. ಆದರೆ, ಇಂದು ಲಾಭ ಸಿಗಬಹುದೇ ಎನ್ನುವ ಆಲೋಚನೆ ಮಾಡಿ ಬರುತ್ತಿದ್ದಾರೆ. ಚಳವಳಿಗಳು ನಿಂತ ನೀರಲ್ಲ, ಚಳವಳಿಗಳು ನದಿಯಂತೆ ಹರಿಯುತ್ತಲೇ ಇರಬೇಕು. ರಾಜ್ಯದಲ್ಲಿ ದಲಿತ ಚಳವಳಿಯನ್ನು ಮತ್ತೆ ಬಲಗೊಳಿಸುವ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಬೆಟ್ಟಯ್ಯಕೋಟೆ, ಮಲ್ಲೇಶ್ ಚುಂಚನಹಳ್ಳಿ, ದೇವಗಳ್ಳಿ ಸೋಮಶೇಖರ್, ಕೆ.ಪಿ.ಮಹಾಲಿಂಗು, ರಾಚಯ್ಯ, ಭರತ್ ರಾಮಸ್ವಾಮಿ, ನಂಜುಂಡಮೂರ್ತಿ, ದ್ಯಾವಪ್ಪ ನಾಯಕ, ಡಿ.ಕುನ್ನೇಗೌಡ, ವೆಂಕಟರಮಣಸ್ವಾಮಿ, ಎನ್.ಆರ್. ನಾಗೇಶ್, ಸವಿತಾ ಪ.ಮಲ್ಲೇಶ್, ಶಿವಕುಮಾರ್, ಕೆ.ಆರ್. ಗೋಪಾಲಕೃಷ್ಣ, ಪತ್ರಕರ್ತ ಕೆ.ಶಿವಕುಮಾರ್, ಕೆಎಎಸ್ ಅಧಿಕಾರಿ ಡಿ.ಚಂದ್ರಶೇಖರ್ ಹಾಗೂ ಇತರರು ಇದ್ದರು.