

ಚಿಕ್ಕಮಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ರೇಖಾ ಹುಲಿಯಪ್ಪಗೌಡ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಡಿ ರೇವಣ್ಣ ಮಹಿಳೆಯರ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮೃಗಗಳಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ವರ್ತಿಸಿದ್ದಾರೆ. ಆರೋಪಿಯಾಗಿರುವ ರೇವಣ್ಣ ಅವರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ವಿದೇಶಕ್ಕೆ ರಾತ್ರೋ ರಾತ್ರಿ ಪಲಾಯನ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಅವರ ಕುಟುಂಬದವರು ಧೈರ್ಯಗೆಡದೆ ಆರೋಪಿ ಮೇಲೆ ದೂರು ದಾಖಲಿಸಿ ಶಿಕ್ಷೆ ಕೊಡಿಸಲು ಸಹಕಾರ ನೀಡಬೇಕು. ದೂರು ನೀಡಲು ಸಂತ್ರಸ್ತ ಮಹಿಳೆಯರು ಯಾರೇ ಮುಂದೆ ಬಂದರೂ ಅವರಿಗೆ ನಾವು ಮತ್ತು ನಮ್ಮ ಪಕ್ಷ ರಕ್ಷಣೆ ಕೊಡಿಸುವುದಲದೇ ಎಲ್ಲ ರೀತಿಯ ನೆರವು ನೀಡಲು ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಮಾತನಾಡಿ, ಶಾಸಕ ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೂಮಿ ಮೇಲೆ ಇರಲು ಅರ್ಹತೆ ಇಲ್ಲ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯವರಾಗಲಿ ಶೋಭಾ ಕರಂದ್ಲಾಜೆ ಅವರಾಗಲಿ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರ ಫಲಿತಾಂಶ ಬಂದರೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಗಡಿಪಾರು ಮಾಡಬೇಕು. ಇದರೊಂದಿಗೆ ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಭಾನ ಸುಲ್ತಾನ, ಜಿಪಂ ಮಾಜಿ ಸದಸ್ಯೆ ಹೇಮಾವತಿ ಇದ್ದರು.