

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲಾ ಹಾಲು ಒಕ್ಕೂಟಗಳು ಬೇಸಿಗೆಯಲ್ಲಿ ಉತ್ಪಾದನೆ ಪ್ರಮಾಣ ಕುಸಿತ ಮತ್ತು ದುಬಾರಿ ನಿರ್ವಹಣೆ ಲೆಕ್ಕಚಾರದಲ್ಲಿ ಲೀಟರ್ ಹಾಲಿಗೆ ರೈತರಿಗೆ ನೀಡುತ್ತಿದ್ದ ದರವನ್ನು ಹೆಚ್ಚಿಸಿವೆ. ಇದರ ಖುಷಿಯ ನಡುವೆ ಎರಡೂ ಕಡೆ ಏರಿಕೆಯಲ್ಲಿನ ವ್ಯತ್ಯಾಸವು ಚರ್ಚೆಗೆಗ್ರಾಸವಾಗಿದೆ.
ಹೌದು! ಅತ್ತ ಲೀಟರ್ ಹಾಲಿಗೆ ಕೋಮುಲ್ 2 ರೂ ಏರಿಸಿದರೆ, ಇತ್ತ ಚಿಮುಲ್ ಮಾತ್ರ 1 ರೂ ಹೆಚ್ಚಿಗೆ ನೀಡುತ್ತಿದೆ. ಈ ಭಾಗದಲ್ಲೂ ಸಹ 2 ರೂ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ದುಬಾರಿ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಹೈನುಗಾರಿಕೆಯಿಂದ ಕೃಷಿಕರು ವಿಮುಖರಾಗುವುದರ ಪ್ರಮಾಣವು ಕಡಿಮೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
2025 ನೇ ಸಾಲಿನ ಜ.1 ರಂದು ಕೋಲಾರದಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ರಚನೆಯಾಯಿತು. ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿಯ ಅಧಿಕಾರಾವಧಿ ಅಂತ್ಯಗೊಂಡಿರುವುದರಿಂದ ಪ್ರಸ್ತುತ ಆಡಳಿತಾಧಿಕಾರಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಲೀಟರ್ ಹಾಲಿನ ದರ 1 ರೂ ಏರಿಕೆ ಘೋಷಿಸಿದ್ದಾರೆ. ಇದು ಮಾ.15 ರಿಂದ ಮೇ.15 ರವರೆಗೆ ಜಾರಿಯಲ್ಲಿರುತ್ತದೆ ಎಂಬುದಾಗಿ ಹೇಳಿದ್ದಾರೆ.
*ದುಬಾರಿ ನಿರ್ವಹಣೆ ಹೆಚ್ಚಳ
ನೀರಿನ ಹಾಹಾಕಾರ, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿಗಳ ವೈಲ್ಯ, ಮೇವಿನ ಅಭಾವ ಸೇರಿದಂತೆ ನಾನಾ ಸಮಸ್ಯೆಗಳ ನಡುವೆ ಅನೇಕ ರೈತರು ಹೈನುಗಾರಿಕೆ ಕೈಗೊಳ್ಳುತ್ತಿದ್ದಾರೆ. ಆದರೆ, ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ದರ ಸಿಗುತ್ತಿಲ್ಲ. ಜತೆಗೆ ಆದಾಯ ಕುಸಿತದಿಂದ ಅನೇಕರು ರಾಸುಗಳ ಸಾಕಾಣೆಯನ್ನು ಕಡಿಮೆಗೊಳಿಸುತ್ತಿದ್ದಾರೆ.
ಪ್ರಸ್ತುತ 45 ಕೆ.ಜಿ.ಬೂಸಾ 1400 ರೂ, 30 ಕೆ.ಜಿ.ಯ ಚಕ್ಕೆ 1300 ರಿಂದ 1600 ರೂ, ಒಕ್ಕೂಟದ ಸೊಸೈಟಿ ವಿತರಣೆಯ ಫೀಡ್ ದರ 1200 ರೂ ಇದ್ದು ನಿರಂತರವಾಗಿ ಪಶು ಆಹಾರ ದರವೂ ಏರಿಕೆಯಾಗುತ್ತಿದೆ. ಇದಕ್ಕೆ ಹಾಲಿನ ದರ ಹೆಚ್ಚಿಸಲು ಒತ್ತಡ ಹೇರುತ್ತಿದ್ದರೂ ಮಾತ್ರ ವೈಜ್ಞಾನಿಕ ದರ ನಿಗದಿಯಾಗುತ್ತಿಲ್ಲ. ಇದರ ಆಕ್ರೋಶವನ್ನು ತಣಿಸಲು ಆಗಾಗ 1 ರೂ ಇಲ್ಲವೇ 2 ರೂ ಏರಿಸುವಂತಹುದಾಗುತ್ತಿದೆ. ಆದರೆ, ಮತ್ತೆ ಕೆಲ ದಿನಗಳಲ್ಲಿ ಪಶು ಆಹಾರ ದರ ಹೆಚ್ಚಳವು ಲಾಭವನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪ ರೈತರದ್ದಾಗಿದೆ.
*ಹಾಲಿನ ದರ ಎಷ್ಟು?
ಹಾಲು ಉತ್ಪಾದಕರಿಗೆ ಇನ್ನು ನೀಡುವ ಲೀಟರ್ ಹಾಲಿನ ದರವು ಹಿಂದೆ 31.40 ರೂ ಇತ್ತು. ಇದೀಗ ಮಾ.15 ರಿಂದ 32.40 ರೂ ಸಿಗುತ್ತಿದೆ. ಇದರೊಂದಿಗೆ 1 ರೂ ಹೆಚ್ಚಳವಾಗಿದ್ದು ಮೇ.15 ರವರೆಗೆ ವಿತರಿಸಲು ನಿರ್ಧರಿಸಲಾಗಿದೆ. ಬಳಿಕ ಹೆಚ್ಚುವರಿ ರೂ ಕಡಿತಗೊಳಿಸಿ ದರವನ್ನು ಇಳಿಸಬಹುದು ಇಲ್ಲವೇ ಹಾಗೆಯೇ ಉಳಿಸಿಕೊಳ್ಳಬಹುದು.