

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಮತ್ತು ಅತಿಥಿ ಉಪನ್ಯಾಸಕರಿಗೆ ಕನಿಷ್ಠ 50,000 ರೂಪಾಯಿ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ಕವಿವಿ ಹಾಗೂ ಅಧೀನ ಮಹಾವಿದ್ಯಾಲಯಗಳ ಸಹಾಯಕ- ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಶರಣು ಮುಷ್ಠಿಗೇರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸುಮಾರು 600ಕ್ಕೂ ಹೆಚ್ಚು ಸಹಾಯಕ ಮತ್ತು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಕನಿಷ್ಠ ವೇತನ 50,000 ರೂ. ವೇತನ ನೀಡಬೇಕು ಎಂದು ಆದೇಶಿಸಿದೆ. ಬೆಂಗಳೂರು ಜ್ಞಾನಭಾರತಿ ವಿವಿ ಮತ್ತು ಬೆಂಗಳೂರು ಉತ್ತರ ಹಾಗೂ ನಗರ ವಿವಿ, ಗುಲ್ಬರ್ಗಾ ವಿವಿ 50,000 ರೂ., ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿವಿ 54,845 ರೂ. ಹಾಗೂ ಶಿವಮೊಗ್ಗ ಕುವೆಂಪು ವಿವಿ 45,000 ರೂ. ವೇತನ ನೀಡುತ್ತಿವೆ. ಆದರೆ, ಶೈಕ್ಷಣಿಕ ಅರ್ಹತೆಗಳನ್ವಯ ನೇಮಕ ಮಾಡಿಕೊಂಡಿರುವ ಕರ್ನಾಟಕ ವಿಶ್ವವಿದ್ಯಾಲಯ ಆದೇಶವನ್ನು ಪಾಲಿಸುತ್ತಿಲ್ಲ. ಸುಮಾರು 25 ವರ್ಷಗಳಿಂದ ಬೋಧನಾ ಕಾರ್ಯವನ್ನು ನಿರ್ವಹಿಸುತ್ತಿದ್ದು, ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದೇವೆ. ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಂದರು.
ಯುಜಿಸಿ ಮಾರ್ಗಸೂಚಿಯಂತೆ ರಾಜ್ಯದ ಇತರ ವಿಶ್ವವಿದ್ಯಾಲಯಗಳು ನೀಡುತ್ತಿರುವ ಕನಿಷ್ಠ ವೇತನವನ್ನು ನಮಗೂ ನೀಡಿ ತಾರತಮ್ಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಡಾ. ಮಹಾದೇವ ಆರೇರ, ಡಾ. ಮಹೇಂದ್ರ ಹರಿಹರ, ಡಾ. ಎಂ.ವೈ. ಬ್ಯಾಲಾಳ, ಡಾ. ರಂಗಪ್ಪ ಎಂ.ಎನ್., ಡಾ. ರಾಮಕೃಷ್ಣ, ವಿಪುಲಾ ಮಹೀಂದ್ರಕರ, ಡಾ. ಪತ್ರೆಮ್ಮ ಧಾರವಾಡ ಸುದ್ದಿಗೋಷ್ಠಿಯಲ್ಲಿದ್ದರು.