

ಸವದತ್ತಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಉಪತಹಸೀಲ್ದಾರ್ ಎಂ.ಎನ್.ಮಠದ ಮೂಲಕ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಸ್. ನಾಯಕ ಮಾತನಾಡಿ, ಅಕ್ಷರ ದಾಸೋಹ ನೌಕರರು ಕೋವಿಡ್-19 ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸಿದ್ದು, ಏಪ್ರಿಲ್ ತಿಂಗಳಿನಿಂದ ಶಾಲೆಗಳು ಮರು ಆರಂಭವಾಗುವವರೆಗೆ ಸಂಪೂರ್ಣ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದ 1.18 ಲಕ್ಷ ಮಹಿಳೆಯರು ಕಳೆದ 18 ರಿಂದ 20 ವರ್ಷಗಳಿಂದ ದುಡಿಯುತ್ತಿದ್ದು, ಅವರಲ್ಲಿ ವಿಧವೆಯರು, ವಿವಾಹ ವಿಚ್ಛೇದಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಮಹಿಳೆಯರು ಇದ್ದಾರೆ. ಕುಟುಂಬಗಳು ಅವರ ದುಡಿಮೆಯನ್ನೇ ನಂಬಿಕೊಂಡಿವೆ.
ಕೋವಿಡ್-19 ಸಂದರ್ಭದಲ್ಲಿಯೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳ ಮನೆ-ಮನೆಗಳಿಗೆ ತಲುಪಿಸುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡಿದ್ದಾರೆ ಎಂದರು.
ನೌಕರರಿಗೆ ಸರ್ಕಾರದ ಯೋಜನೆಯಡಿಯಲ್ಲಿ ತಿಂಗಳಿಗೆ ಕೇವಲ 2600 ರಿಂದ 2700 ರೂ. ಸಂಭಾವನೆ ನೀಡುತ್ತಿದ್ದು, ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಅವರ ನೌಕರಿಯನ್ನು ಕಾಯಂ ಮಾಡಿ ಎಲ್‌ಐಸಿ ಆಧಾರಿತ ಪೆನ್ಶನ್ ನೀಡಬೇಕು. ಮಕ್ಕಳ ವಿದ್ಯಾಭ್ಯಾಸ ಮತ್ತು ಇತರೆ ಶುಲ್ಕದ ವಿನಾಯಿತಿ ನೀಡಬೇಕು ಎಂದರು.
ಎಲ್.ವಿ.ಅಮಠೆ, ಸುಮತಿ ಕೊಲ್ಲಾಪುರ, ಪಾರ್ವತಿ ಸಾಲಿಮಠ, ಶ್ರೀಕಾಂತ ಹಟ್ಟಿಹೊಳಿ, ರೇಣುಕಾ ದೇಸಾಯಿಪಟ್ಟಿ, ಜ್ಯೋತಿ ಅಮಠೆ, ಸಂಗಮೇಶ ಸಿದ್ನಾಳ ಇತರರಿದ್ದರು.