ಬೇಡಿಕೆ ಈಡೇರಿಕೆಗೆ ಆಗ್ರಹ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೋರ್ಟ್ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ರೈತರ ಪ್ರತಿ ಎಕರೆಗೆ 20 ಸಾವಿರ ರೂ.ದಂತೆ ಬರಗಾಲ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡುವುದು, ಜಾನುವಾರುಗಳಿಗೆ ಸೂಕ್ತ ಮೇವಿನ ವ್ಯವಸ್ಥೆ, ಪ್ರತಿ ನಿತ್ಯ 9 ತಾಸು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕಕ್ಕೆ ನೋಂದಣಿ ಶುಲ್ಕ 50 ರೂ. ಹಾಗೂ 18,500 ರೂ. ಠೇವಣಿ ಪಡೆಯಲಾಗುತ್ತಿತ್ತು. ಆದರೆ ಸರ್ಕಾರ ಈ ಯೋಜನೆ ರದ್ದುಗೊಳಿಸಿದ್ದರಿಂದ ರೈತರಿಗೆ ಕಷ್ಟವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಿಂದಿನ ಯೋಜನೆ ಮರು ಜಾರಿ ಮಾಡಬೇಕು. ರೈತರ ಹೆಸರಿನಲ್ಲಿರುವ ಎಲ್ಲ ಬ್ಯಾಂಕ್‌ಗಳ ಸಾಲವನ್ನು ಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಫಸಲ ಭಿಮಾ ಯೋಜನೆಯಲ್ಲಿನ ಅವ್ಯವಸ್ಥೆ ಸರಿ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಗುರುನಾಥಗೌಡ್ರ ಬಸನಗೌಡ್ರ, ಗುರುನಾಥ ಬೀರನವರ, ಮಂಜುನಾಥ ಗೌರಿ, ಶ್ರೀಶೈಲ ಬಾಚಗುಂಡಿ, ನಾಗಣ್ಣ ಬೆಳ್ಳಿಗಟ್ಟಿ, ಗೋಪಾಲ ದಿವಟೆ, ರೈತರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net