

ವಿಜಯವಾಣಿ ಸುದ್ದಿಜಾಲ ಕುಂದಾಪುರ ಹಿಂದಿನ ವರ್ಷ ಕುಂದಾಪುರ ವಿಧಾನಸಭಾ ವ್ಯಾಪ್ತಿಯ 22 ಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡಿದ್ದು, ಈ ಬಾರಿಯೂ ಅಷ್ಟೇ ಶಾಲೆಗಳಿಂದ ಬೇಡಿಕೆ ಬಂದಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಸುತ್ತಿದ್ದು, ಪ್ರತಿ ಶಾಲೆಗಳಲ್ಲೂ ಮುಖ್ಯಶಿಕ್ಷಕರು ಉಪಸ್ಥಿತರಿರಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕುಂದಾಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆ ಪ್ರಗತಿ ಹಾಗೂ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ ಬಗ್ಗೆ ಸೋಮವಾರ ಆಯೋಜಿಸಿದ್ದ ಕುಂದಾಪುರ ಹಾಗೂ ಬೈಂದೂರು ವ್ಯಾಪ್ತಿಯ ಪ್ರೌಢಶಾಲಾ ಮುಖ್ಯಶಿಕ್ಷಕರ, ಎಸ್ಡಿಎಂಸಿಯವರ ಸಭೆಯಲ್ಲಿ ಮಾತನಾಡಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ವ್ಯಾಪ್ತಿಯಲ್ಲಿ ಕಳೆದ ವರ್ಷ 12 ಶಾಲೆಗಳಲ್ಲಿ ತರಬೇತಿ ನೀಡಿದ್ದು, ಈ ಬಾರಿ ಹೆಚ್ಚುವರಿಯಾಗಿ 7 ಶಾಲೆಗಳಿಂದ ಯಕ್ಷ ಶಿಕ್ಷಣದ ಬೇಡಿಕೆ ಇದೆ ಎಂದರು. ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾಹಿತಿ ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಕುಂದಾಪುರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬೈಂದೂರು ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಶಿಕ್ಷಣಾಧಿಕಾರಿ ಶಬನಾ ಅಂಜುಂ, ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಯಕ್ಷ ಶಿಕ್ಷಣ ಟ್ರಸ್ಟ್ ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು. ಚಂದ್ರಶೇಖರ ಶೆಟ್ಟಿ ನಿರೂಪಿಸಿದರು.
ದಾನಿಗಳ ನೆರವಿನಿಂದ ಯಕ್ಷ ಶಿಕ್ಷಣಕ್ಕೆ 1 ಕೋಟಿ ರೂ. ವ್ಯಯಿಸಲಾಗಿದೆ. 2,805 ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಿದ್ದು, 91ಪ್ರದರ್ಶನಗಳು ಆಯೋಜನೆಗೊಂಡಿವೆ. ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ ವೈಯಕ್ತಿಕವಾಗಿ 10 ಲಕ್ಷ ರೂ. ನೀಡಿದ್ದು, ಸಾಲಿಗ್ರಾಮ ಹಾಗೂ ಕುಂದಾಪುರದಲ್ಲಿ ತಲಾ 1 ವಾರದ ಪ್ರದರ್ಶನ ಉಚಿತವಾಗಿ ನಡೆಯುವಂತೆ ಮಾಡಿದ್ದಾರೆ.