ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆಯಲು ಆಗ್ರಹ

7 vikram 8
Published on

ಧಾರವಾಡ: ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ನಿರ್ವಹಣೆ, ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ನಗರದ ಕೆಐಎಡಿಬಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಗಾಮನಗಟ್ಟಿ ಕೈಗಾರಿಕೆ ಪ್ರದೇಶದಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. ಕೆಐಎಡಿಬಿ ನಿವೇಶನ ಬೆಲೆ ಹೆಚ್ಚಳ ಮಾಡಿರುವುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಶೇ. 60ರಿಂದ 75ರಷ್ಟು ಬೆಲೆ ಹಚ್ಚಳ ಮಾಡುವ ಮೂಲಕ ಉದ್ಯಮದಾರರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಭಾರತ 2 ವರ್ಷಗಳಿಂದ ಅನುಭವಿಸುತ್ತಿರುವ ಆರ್ಥಿಕ ಕುಸಿತ, 6 ತಿಂಗಳಿಂದ ಕಾಡುತ್ತಿರುವ ಕರೊನಾ ಸಂಕಷ್ಟದಿಂದ ಕೈಗಾರಿಕೆಗಳು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉಳಿವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಗಾಮನಗಟ್ಟಿ ಕೈಗಾರಿಕೆ ಪ್ರದೇಶಗಳಲ್ಲಿ ವ್ಯವಸ್ಥಿತ ರಸ್ತೆ, ಕಸದ ನಿರ್ವಹಣೆ, ನೀರು ಪೂರೈಕೆ, ಒಳಚರಂಡಿ ನಿರ್ವಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಬೀದಿ ದೀಪಗಳು ಸೇರಿ ಅಗತ್ಯ ಮೂಲಸೌಕರ್ಯಗಳನ್ನು ದಕ್ಷತೆಯಿಂದ ನಿರ್ವಹಣೆ ಮಾಡಬೇಕು. ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಉದ್ಯಮಿದಾರರ ಅಲೆದಾಟ ತಪ್ಪಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಪರಿಣಾಮಕಾರಿ ಹಸ್ತಾಂತರ ನೀತಿ ರೂಪಿಸಿ ಸ್ಥಳೀಯ ಸಂಸ್ಥೆಗಳಿಗೆ ಕೈಗಾರಿಕಾ ಪ್ರದೇಶಗಳನ್ನು ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮೂಲಕ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿಪತ್ರ ರವಾನಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಶಶಿಕುಮಾರ ಸುಳ್ಳದ, ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಪ್ರತಿಭಾ ದಿವಾಕರ, ಶಿವಕಿರಣ ಅಗಡಿ, ವೀರೇಂದ್ರ ಸಾಂಬ್ರಾಣಿ, ಮಹಾಂತೇಶ ದಿಂಡಲಕೊಪ್ಪ, ಅಭಿಷೇಕ ಲದ್ವಾ, ಡೇನಿಯಲ್ ಐ., ಶಿವಕುಮಾರ ಬಾಗಲಕೋಟೆ, ಮೆಹಬೂಬರ ಹರವಿ, ಮಂಜುನಾಥ ಸುಳ್ಳದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net