

ಶೃಂಗೇರಿ: ಪಟ್ಟಣದ ಗಾಂಧಿ ಮೈದಾನ ಪಾರ್ಕಿಂಗ್‌ನಿಂದ ಬರುವ ಅದಾಯ ಪಟ್ಟಣ ಪಂಚಾಯಿತಿಗೆ ತೀರಾ ಅಗತ್ಯವಾಗಿದ್ದು, ಗಾಂಧಿ ಮೈದಾನಕ್ಕೆ ವಿಧಿಸಿರುವ ನಿಷೇಧಿತ ವಲಯ ಪ್ರದೇಶದ ಆದೇಶವನ್ನು ಹಿಂಪಡೆಯಲು ಜಿಲ್ಲಾಧಿಕಾರಿಗೆ ಒತ್ತಾಯಿಸಲು ಪಪಂ ಸಭಾಂಗಣದಲ್ಲಿ ನಡೆದ ಪಪಂ ಅಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ಗಾಂಧಿಮೈದಾನ ಪಾರ್ಕಿಂಗ್ ಟೆಂಡರ್‌ನಿಂದ ಪ್ರತಿ ವರ್ಷ 75 ರಿಂದ 80 ಲಕ್ಷ ರೂ. ವಾರ್ಷಿಕ ಆದಾಯ ಬರುತ್ತಿದೆ. ಪಪಂನ ಅಭಿವೃದ್ಧಿ ಹಾಗೂ ನೌಕರರ ವೇತನಕ್ಕೆ ಈ ಆದಾಯ ಪ್ರಾಮುಖ್ಯವಾಗಿದೆ. ಜಿಲ್ಲಾಧಿಕಾರಿಗಳು ಅತಿವೃಷ್ಟಿಯ ಕಾರಣ ಗಾಂಧಿಮೈದಾನವನ್ನು ನಿಷೇಧಿತ ವಲಯ ಎಂದು ಘೋಷಿಸಿದ್ದರು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಮಾಡಿದರೂ ಆದೇಶ ವಾಪಾಸ್ ಪಡೆದಿಲ್ಲ ಎಂದರು.
ಪಪಂ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನಗಳು ಬಾರದ ಕಾರಣ ಪಾರ್ಕಿಂಗ್‌ನಿಂದ ಬರುವ ಹಣ ಪಪಂಗೆ ತೀರಾ ಅಗತ್ಯವಾಗಿದೆ. ಜಿಲ್ಲಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಾಮನಿರ್ದೇಶಿತ ಸದಸ್ಯೆ ಸೌಮ್ಯ ವಿಜಯ್‌ಕುಮಾರ್ ಮಾತನಾಡಿ, ಪಟ್ಟಣದ ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದ ಸಮೀಪ ಇರುವ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಪಪಂನಿಂದ ನೂತನ ವಾಣಿಜ್ಯ ಕಟ್ಟಡ ನಿರ್ಮಿಸಿದರೆ ಪಪಂನಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ಶಾರದಾ ನಗರದ ಸಮುದಾಯ ಭವನ ಬಾಡಿಗೆ ನೀಡುವ ಕುರಿತು ಪಪಂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.