ಚಾಮರಾಜನಗರ: ಹನೂರು ತಾಲೂಕಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಜನತೆ ನೀರಿನಾಂಶವುಳ್ಳ ಪದಾರ್ಥಗಳತ್ತ ಮುಖ ಮಾಡಿದ್ದಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕರ್ಬೂಜ ವ್ಯಾಪಾರ ಜೋರಾಗಿದೆ.
ತಾಲೂಕಿನಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು ಬರದ ಛಾಯೆ ಆವರಿಸಿದೆ. ಬೇಸಿಗೆಗೂ ಮುನ್ನವೇ ಬಿಸಿಲಿನ ಬೇಗೆ ಹೆಚ್ಚಾಗಿದೆ. ಕಳೆದ ವಾರದಿಂದ ತೀವ್ರತೆ ಜಾಸ್ತಿಯಾಗಿದೆ. ಬಿಸಿಲಿನಿಂದ ಜನತೆ ಬಸವಳಿದಿದ್ದು, ಕೆಲಸ ಕಾರ್ಯಗಳಲ್ಲಿ ತೊಡಗಲು ನಿರಾಸಕ್ತಿ ತೋರುವಂತಾಗಿದೆ. ಈ ಹಿಂದೆ ಹನೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರು ಬೇಸಿಗೆಯಲ್ಲಿ ಬಹುಜನರ ಬೇಡಿಕೆಯ ಕಲ್ಲಂಗಡಿ, ಮಿಣಕೆಹಣ್ಣು(ಕರ್ಬೂಜ), ಸೌತೆಕಾಯಿಯನ್ನು ಬೆಳೆದು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ರೈತರು ಬೆಳೆದಿಲ್ಲ. ಇದರಿಂದ ಯಳಂದೂರು ಹಾಗೂ ಕೊಳ್ಳೇಗಾಲ ಭಾಗದ ರೈತರು ಕರ್ಬೂಜ, ಕಲ್ಲಂಗಡಿಯನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದು, ಉತ್ತಮ ಬೇಡಿಕೆ ಇದೆ.
ನಾಲ್ಕೈದು ದಿನಗಳಿಂದ ಹನೂರು ಭಾಗದಲ್ಲಿ ಬಿಸಿಲಿನ ಬೇಗೆ ಅಧಿಕವಾಗಿದೆ. 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಬೇಸಿಗೆಯ ಪೂರ್ವದಲ್ಲೇ ಇಷ್ಟು ಉಷ್ಣಾಂಶ ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ. ಇದರಿಂದ ಜನರು ತಂಪು ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಪಟ್ಟಣದಲ್ಲಿ ಗುರುವಾರ ಮಿಣಕೆಹಣ್ಣು, ಸೌತೆಕಾಯಿ, ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿತ್ತು.
ಬೇಡಿಕೆ ಹೆಚ್ಚಿದ್ದರಿಂದ ಮಿಣಕೆಹಣ್ಣು, ಕಲ್ಲಂಗಡಿ ಪ್ರತಿ ಕೆಜಿಗೆ 50 ರೂ. ಇತ್ತು. ಎಳನೀರಿಗೂ ಬೇಡಿಕೆ ಹೆಚ್ಚಿದ್ದು ಒಂದಕ್ಕೆ 35 ರೂ.ಗೆ ಮಾರಾಟವಾಗುತ್ತಿದೆ. ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ ಮಾರ್ಗದ ರಸ್ತೆ ಬದಿಯ ಅಲ್ಲಲ್ಲಿ ಎಳನೀರನ್ನು ಇಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿದೆ.