

ಬೇಲೂರು: ಪುರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳ ನಾಮ ಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸುವಂತೆ ಆಗ್ರಹಿಸಿ ಕರವೇ (ನಾರಾಯಣ ಗೌಡ)ಬಣದ ಕಾರ್ಯಕರ್ತರು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್‌ಗೆ ಬುಧವಾರ ಮನವಿ ಸಲ್ಲಿಸಿದರು.
ಕರವೇ(ನಾರಾಯಣ ಗೌಡ)ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಶೇ.60ರಷ್ಟು ನಾಮ ಫಲಕ ಕನ್ನಡದಲ್ಲಿರಬೇಕು ಎಂದು ಸರ್ಕಾರವೇ ಆದೇಶಿಸಿದೆ. ಆದರೂ ಪಟ್ಟಣದಲ್ಲಿ ಕೆಲವರು ಇನ್ನೂ ಆಂಗ್ಲ ಭಾಷೆಯಲ್ಲೇ ನಾಮ ಫಲಕದಲ್ಲಿ ಹೆಸರು ಬರೆಸಿದ್ದು, ಅವುಗಳನ್ನು ನ.1ರೊಳಗೆ ತೆಗೆಸಬೇಕು. ಇಲ್ಲದಿದ್ದಲ್ಲಿ ನಾವೇ ನಮ್ಮ ಸಂಘಟನೆ ಕಾರ್ಯಕರ್ತರೊಂದಿಗೆ ಬೀದಿಗಿಳಿದು ನಾಮ ಫಲಕಗಳನ್ನು ತೆರವುಗೊಳಿಸಿ ಪ್ರತಿಭಟಿಸಬೇಕಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಗಮನ ಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಕರವೇ ಕಾರ್ಯಕರ್ತರ ಬೇಡಿಕೆ ಉತ್ತಮವಾಗಿದೆ. ಪಟ್ಟಣದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳಿಗೆ ಒತ್ತು ನೀಡಿದ್ದರೆ ಅಂತಹವುಗಳ ಮಾಹಿತಿ ಪಡೆದು ನೋಟಿಸ್ ನೀಡಿ ಏಳು ದಿನಗಳ ಕಾಲವಕಾಶ ಕೊಡಲಾಗುವುದು. ಅಷ್ಟರೊಳಗೆ ಶೇ.60ರಷ್ಟು ಕನ್ನಡದಲ್ಲೆ ನಾಮ ಫಲಕದಲ್ಲಿ ಬರೆಸಿ ಅಳವಡಿಸಬೇಕು. ಇಲ್ಲದಿದ್ದಲ್ಲಿ ಪುರಸಭೆಯಿಂದಲೇ ಆಂಗ್ಲ ಭಾಷೆಗಳ ನಾಮ ಫಲಕಗಳನ್ನು ತೆರವು ಗೊಳಿಸಿ ದಂಡ ವಿಧಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಸದಸ್ಯರಾದ ಜಮಾಲೂದ್ದೀನ್, ಜಗಧೀಶ್, ಪ್ರಭಾಕರ್, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಖಾದರ್, ಗೌರವಾಧ್ಯಕ್ಷ ಮಾಳೇಗೆರೆ ತಾರಾನಾಥ್, ಉಪಾಧ್ಯಕ್ಷ ಕೋಗಿಲಮನೆ ಕುಮಾರ್, ಮುಖಂಡರಾದ ಸಂದೀಪ್, ರುದ್ರೇಶ್, ಪ್ರಸನ್ನ, ದರ್ಶನ್, ಕಪಾಲಿ ರಾಜು ಸೇರಿದಂತೆ ಇತರರಿದ್ದರು.