

ಹಾವೇರಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಬೆಳೆಗಳು ನಳನಳಿಸುತ್ತಿವೆ. ಮಳೆ ಇನ್ನೂ ಸುರಿಯುತ್ತಿರುವ ಪರಿಣಾಮ ರೈತರು ಮೇಲ್ಗೊಬ್ಬರ ಹಾಕಲು ಮುಂದಾಗುತ್ತಿದ್ದು, ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3.30 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಈಗಾಗಲೇ 3.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. 2.65 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಹಾಗೂ 65 ಸಾವಿರ ಹೆಕ್ಟೇರ್ ನೀರಾವರಿ ಸೇರಿ 3.30 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 2.64 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಜಮೀನಿನಲ್ಲಿ ಬಿತ್ತನೆಯಾಗಿದೆ. 43 ಸಾವಿರ ಹೆಕ್ಟೇರ್ ನೀರಾವರಿ ಭೂಮಿಯಲ್ಲೂ ಬಿತ್ತನೆಯಾಗಿದೆ. 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 14 ಸಾವಿರ ಹೆಕ್ಟೇರ್ನಲ್ಲಿ ಸೋಯಾ, 44 ಸಾವಿರ ಹೆಕ್ಟೇರ್ನಲ್ಲಿ ಹತ್ತಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಗೋವಿನಜೋಳ ಹೆಚ್ಚಾಗಿ ಬೆಳೆಯುತ್ತಿದ್ದು, ಈ ಸಲ 2 ಲಕ್ಷ ಹೆಕ್ಟೇರ್ನಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರ ಸೇರಿ ಸುಮಾರು 15 ದಿನಗಳ ಕಾಲ ಮಳೆಯೇ ಇಲ್ಲದೇ ಬೆಳೆಗಳು ಒಣಗುವ ಹಂತಕ್ಕೆ ಬಂದಿದ್ದವು. ಆದರೆ, ಕಳೆದೊಂದು ವಾರದಿಂದ ಹದವಾದ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ಒಣಗುವ ಅಪಾಯದಲ್ಲಿದ್ದ ಬೆಳೆಗಳು ಮತ್ತೆ ಚಿಗುರೊಡೆಯತೊಡಗಿವೆ. ಬಹುತೇಕ ಎಲ್ಲ ಬೆಳೆಗಳು 15ರಿಂದ ಒಂದು ತಿಂಗಳದಾಗಿದ್ದು, ಮಳೆ ನಿಂತ ಕೂಡಲೆ ಮೇಲ್ಗೊಬ್ಬರ ಹಾಕಿದರೆ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಮೇಲ್ಗೊಬ್ಬರವಾಗಿ ಯೂರಿಯಾ ಉಪಯೋಗಿಸುತ್ತಾರೆ. ಆದ್ದರಿಂದ ಯೂರಿಯಾ ಗೊಬ್ಬರ ಸಂಗ್ರಹಿಸಲು ರೈತರು ಮುಂದಾಗಿದ್ದಾರೆ. ಹೀಗಾಗಿ ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.
43 ಸಾವಿರ ಮೆ.ಟನ್ ಯೂರಿಯಾ ಸ್ಟಾಕ್: ಜಿಲ್ಲೆಗೆ ಪ್ರಸಕ್ತ ಮುಂಗಾರು ಹಂಗಾಮಿಗೆ ಇಲಾಖೆಯಿಂದ 57,780 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಹಂಚಿಕೆಯಾಗಿದೆ. ಇದರಲ್ಲಿ ಇದುವರೆಗೆ ಖಾಸಗಿ ಗೊಬ್ಬರ ಮಾರಾಟಗಾರರಲ್ಲಿ 37,184 ಮೆಟ್ರಿಕ್ ಟನ್, ಕೋ ಆಪರೇಟಿವ್ ಸೊಸೈಟಿ ಹಾಗೂ ಕಳೆದ ಹಿಂಗಾರು ಹಂಗಾಮಿನ ಶಿಲ್ಕು ಸೇರಿ 6,225 ಮೆ. ಟನ್ ಯಾರಿಯಾ ದಾಸ್ತಾನಿದೆ. ಒಟ್ಟಾರೆ ಖಾಸಗಿ ಹಾಗೂ ಸೊಸೈಟಿಗಳಲ್ಲಿ ಸದ್ಯ 43,409 ಮೆ.ಟನ್ ಯೂರಿಯಾ ಗೊಬ್ಬರ ಸಂಗ್ರಹವಿದೆ. ಅದರಲ್ಲಿ ಈಗಾಗಲೇ ಕೋ ಆಪರೇಟಿವ್ ಸೊಸೈಟಿಗಳು 2,695 ಮೆ.ಟನ್ ಗೊಬ್ಬರ ಮಾರಾಟ ಮಾಡಿದ್ದು, ಖಾಸಗಿ ವ್ಯಾಪಾರಸ್ಥರು 28,075 ಮೆ.ಟನ್ ಯೂರಿಯಾವನ್ನು ಮಾರಾಟ ಮಾಡಿದ್ದಾರೆ. ಇನ್ನು 12,639 ಮೆ.ಟನ್ ಯೂರಿಯಾ ಸಂಗ್ರಹವಿದೆ. ಯೂರಿಯಾ ಗೊಬ್ಬರಕ್ಕಾಗಿ ಜಿಲ್ಲೆಯಲ್ಲಿ 2008ರಲ್ಲಿ ಗೋಲಿಬಾರ್ ನಡೆದು ಇಬ್ಬರು ರೈತರು ಮೃತಪಟ್ಟಿದ್ದರು. ಆದ್ದರಿಂದ ಯೂರಿಯಾ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯೂ ಹೆಚ್ಚಿನ ಗಮನ ಹರಿಸಿದೆ. ಜಿಲ್ಲೆಯ ಶಾಸಕ ಬಿ.ಸಿ. ಪಾಟೀಲ ಅವರೇ ಕೃಷಿ ಸಚಿವರಾಗಿರುವುದರಿಂದ ರೈತರಿಗೆ ಸಮಸ್ಯೆಯಾಗದಂತೆ ಕಾಳಜಿ ವಹಿಸಿದ್ದಾರೆ.
ಮುಂಗಾರು ಹಂಗಾಮಿಗೆ ಇನ್ನೂ ಸುಮಾರು 15 ಸಾವಿರ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ. ಈಗ ಒಮ್ಮೆಲೆ ಯೂರಿಯಾಕ್ಕೆ ಬೇಡಿಕೆ ಬಂದಿರುವುದರಿಂದ ರೈತರು ಗೊಬ್ಬರಕ್ಕಾಗಿ ಅಲೆದಾಟ ಆರಂಭಿಸಿದ್ದಾರೆ. ಕೆಲವೊಂದು ಅಂಗಡಿಗಳಲ್ಲಿ ಸ್ಟಾಕ್ಯಿುಲ್ಲ ಎಂದು 50ರಿಂದ 100 ರೂ.ಗಳ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.
ಇನ್ನುಳಿದಂತೆ ಎಂಒಪಿ, ಡಿಎಪಿ, ಕಾಂಪ್ಲೆಕ್ಸ್, ಎಸ್ಎಸ್ಪಿ ಗೊಬ್ಬರ ದಾಸ್ತಾನು ಸಾಕಷ್ಟಿದೆ. ಆದರೆ, ರೈತರು ಯೂರಿಯಾವನ್ನೇ ಕೇಳುತ್ತಿರುವುದರಿಂದ ಒಮ್ಮೆಲೇ ಬೇಡಿಕೆ ಬರುತ್ತಿದೆ. ಅದಕ್ಕೆ ತಕ್ಕಂತೆ ಪೂರೈಕೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ರೈತರ ಆಕ್ರೋಶ ಭುಗಿಲೇಳುವ ಸಾಧ್ಯತೆಯೂ ದಟ್ಟವಾಗಿದೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಯೂರಿಯಾ ಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಖಾಸಗಿಯವರು ಕೃತಕ ಅಭಾವ ಸೃಷ್ಟಿಸುವುದನ್ನು ತಪ್ಪಿಸಿ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ದಾಸ್ತಾನಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಬೇಡಿಕೆಗೆ ತಕ್ಕಂತೆ ಯೂರಿಯಾ ಪೂರೈಕೆಯೂ ಆಗುತ್ತಿದೆ. ಈ ವಾರ ಮತ್ತೆ 1 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬರಲಿದೆ. ಸದ್ಯಕ್ಕೆ ಯೂರಿಯಾ ಕೊರತೆಯಿಲ್ಲ. ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವುದು ಕಂಡಬಂದರೆ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು.| ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು ಹಾವೇರಿ