ಅಂಡರ್‌ಪಾಸ್‌ಗೆ ಬೇಡಿಕೆ: ಪೊಯ್ಯದಪಲ್ಕೆ ಗ್ರಾಮಸ್ಥರಿಂದ ಪ್ರತಿಭಟನೆ

Mbd_Protest
Published on

ಮೂಡುಬಿದಿರೆ: ಅಲಂಗಾರು ಕಾನಾ ಸಮೀಪದ ಪೊಯ್ಯದಪಲ್ಕೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಜಾಗದಲ್ಲಿ ಅಂಡರ್‌ಪಾಸ್ ನಿರ್ಮಿಸಿ ಗ್ರಾಮೀಣ ಸಂಪರ್ಕದ ಹಳೇ ರಸ್ತೆಯನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ಗ್ರಾಮೀಣ ರಸ್ತೆಯನ್ನು ಮುಚ್ಚುವುದು ತಪ್ಪು. ಅಲಂಗಾರು ಪೊಯ್ಯದಪಲ್ಕೆ ರಸ್ತೆ ಬಂದ್ ಆದರೆ ಈ ಭಾಗದ ಜನರ ಓಡಾಟಕ್ಕೆ ತೊಂದರೆ ಆಗಲಿದೆ. ಹೆದ್ದಾರಿ ಅಧಿಕಾರಿಗಳು ಇಲ್ಲಿ ಅಂಡರ್ ಪಾಸ್ ನಿರ್ಮಿಸಿ ಹಳೇ ರಸ್ತೆಯನ್ನು ಉಳಿಸಿ ಜನರಿಗೆ ಅನುಕೂಲ ವಾಡಿಕೊಡಬೇಕು. ತಪ್ಪಿದಲ್ಲಿ ಜನರ ಜತೆ ತಾನೂ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು.

ಪುರಸಭೆ ಸದಸ್ಯ ಪಿ.ಕೆ.ಥೋಮಸ್ ಮಾತನಾಡಿ, ಇಲ್ಲಿ ಅಂಡರ್‌ಪಾಸ್ ನಿರ್ಮಿಸಿ ಎಂದು ಈಗಾಗಲೇ ನಾವು ಮಂಗಳೂರಿನಲ್ಲಿ ಹೆದ್ದಾರಿ ಅಧಿಕಾರಿಗಳನ್ನು ಭೇಟಿ ವಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅವರ ನಿರ್ಲಕ್ಷ್ಯದಿಂದ ಜನತೆ ಪ್ರತಿಭಟನೆ ವಾಡಬೇಕಾದ ಅನಿವಾರ್ಯತೆ ಬಂದಿದೆ. ಅಧಿಕಾರಿಗಳು ಜನರ ಬೇಡಿಕೆಗೆ ಸ್ಪಂದಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಗೋಳಾರ್, ಸ್ಥಳೀಯರಾದ ದಯಾನಂದ ಪೈ, ಡೇನಿಸ್ ಪಿರೇರಾ, ಭರತ್ ಶೆಟ್ಟಿ, ಮುಹ್ಮದ್ ಅಸ್ಲಂ, ಸೂರಜ್ ಬನ್ನಡ್ಕ, ಪಡುವಾರ್ನಾಡು ಪಿಡಿಒ ಸಾಯೀಶ್ ಚೌಟ ಮತ್ತಿತರರಿದ್ದರು.

ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಡಿಬಿಎಲ್ ಮ್ಯಾನೇಜರ್ ಪ್ರಸಾದ್ ಮೂಲಕ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಂಪನಿಯ ಸರ್ವೆಯರ್ ಬಾಲಾಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net