

ಹೊನ್ನಾವರ: ಕೊಡಾಣಿಯಲ್ಲಿ ಕಳೆದ 10 ವರ್ಷಗಳಿಂದ ಗ್ರಾಮ ಆಡಳಿತ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ರಕ್ಷಿತ್ ಪೂಜಾರಿ ಅವ್ಯವಹಾರ ನಡೆಸುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ತಹಸೀಲ್ದಾರ್ ಪ್ರವೀಣ ಕರಾಂಡೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕೊಡಾಣಿ ಗ್ರಾಪಂ ಸದಸ್ಯ ಜಯಂತ ನಾಯ್ಕ ಮಾತನಾಡಿ, ವಂಶವೃಕ್ಷ ಹಾಗೂ ಸಾರ್ವಜನಿಕರು ಸಲ್ಲಿಸಿದ ವಿವಿಧ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಈ ಅಧಿಕಾರಿಯನ್ನು ಪ್ರಶ್ನಿಸಿದರೆ ಅದನ್ನು ಕೇಳಲು ನೀವು ಯಾರು? ಎಂದು ಉಡಾಫೆ ಉತ್ತರ ನೀಡುತ್ತಾರೆ. ಜನಪ್ರತಿನಿಧಿಗಳೊಂದಿಗೆ ಹಾಗೂ ಜನರೊಂದಿಗೆ ಅನುಚಿತವಾಗಿ ವರ್ತಿಸುವ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮೋಹನ ಶೇಟ್, ವಿನಾಯಕ ನಾಯ್ಕ, ಉತ್ತಮ ನಾಯ್ಕ, ಗಣೇಶ ಗೌಡ, ಗೋಪಾಲ ನಾಯ್ಕ ಇತರರು ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರವೀಣ ಕರಾಂಡೆ ಮನವಿ ಸ್ವೀಕರಿಸಿದರು.