ಉಪ ನೋಂದಣಾಧಿಕಾರಿ ವರ್ಗಾವಣೆಗೆ ಆಗ್ರಹ

Published on

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದಲ್ಲಿರುವ ಉತ್ತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉಪ ನೋಂದಣಾಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕ್ರೆಡೈ, ಕೆಸಿಸಿಐ, ಬಾಂಡ್ ರೈಟರ್ಸ್ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪ ನೋಂದಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಆಧಾರ್ ಕಾರ್ಡ್ ನೀಡಿದರೂ ನೋಂದಣಿ ಕಾರ್ಯ ಮಾಡುತ್ತಿಲ್ಲ. ಏನಾದರೊಂದು ಕಾರಣ ಹೇಳಿ ಜನರನ್ನು ವಾಪಸ್ ಕಳುಹಿಸುತ್ತಾರೆ. ಎಲ್ಲ ಸರಿ ಮಾಡಿಕೊಂಡು ಬಂದರೂ ಟೋಕನ್ ಕೊಟ್ಟು 7 ತಾಸು ಬಿಟ್ಟು ಬನ್ನಿ, ನಾಳೆ ಬನ್ನಿ ಎಂದು ಓಡಾಡಿಸುತ್ತಾರೆ. ಹಳ್ಳಿಯಿಂದ, ಬೆಂಗಳೂರು ತನಕ ವಿವಿಧ ಊರುಗಳಿಂದ ಇಲ್ಲಿಗೆ ಬರುವ ರೈತರು ಹಾಗೂ ಜನರನ್ನು ವಾರಗಟ್ಟಲೇ ಓಡಾಡಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಮೊದಲು ಈ ಕಚೇರಿಯಲ್ಲಿ ದಿನಕ್ಕೆ 80ಕ್ಕೂ ಅಧಿಕ ದಾಖಲೆಗಳು ನೋಂದಣಿಯಾಗುತ್ತಿದ್ದವು. ಆದರೆ, ಈಗ ಕೇವಲ 30- 40 ನೋಂದಣಿ ಯಾಗುತ್ತಿವೆ. ಇಲ್ಲಿ ಕುಡಿಯುವ ನೀರು, ಸ್ವಚ್ಛ ಶೌಚಗೃಹ ವ್ಯವಸ್ಥೆಯೂ ಇಲ್ಲ. ಬೆಳಗ್ಗೆ 10ಕ್ಕೆ ಕಚೇರಿ ತೆರೆದು 12 ಗಂಟೆವರೆಗೆ ಟೋಕನ್ ಕೊಡುವುದಕ್ಕೆ ಸಮಯ ವ್ಯರ್ಥ ಮಾಡುತ್ತಾರೆ. ಈ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಉಪನೋಂದಣಾಧಿಕಾರಿ ಸೌಮ್ಯಲತಾ ಅವರನ್ನು ವರ್ಗಾವಣೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾದವರು: ಕ್ರೆಡೈ ನಿಯೋಜಿತ ಅಧ್ಯಕ್ಷ ಪ್ರದೀಪ ರಾಯ್ಕರ, ಕ್ರೆಡೈ ಹು-ಧಾ ಘಟಕದ ಅಧ್ಯಕ್ಷ ಸಾಜಿದ್ ಪರಾಶ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಜಿಲ್ಲಾ ಬಾಂಡ್ ರೈಟರ್ಸ್ ಅಸೋಸಿಯೇಷನ್ ತಾಲೂಕು ಘಟಕ ಅಧ್ಯಕ್ಷ ಶಾಂತರಾಜ ಪೋಳ, ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್​ನ ವೀರೇಶ ಉಂಡಿ, ಮಿಡ್​ವ್ಯಾಕ್ ಡೆಲವಪರ್ಸ್​ನ ಮೊಹಮ್ಮದ್ ಇಸ್ಮಾಯಿಲ್ ಸಮ್ಸಿ, ಸುರೇಶ ಎಂಟರ್​ಪ್ರೖೆಸಸ್​ನ ಸುರೇಶ ಶೇಜವಾಡಕರ, ಗ್ಲೋಬಸ್ ಬಿಲ್ಡರ್ಸ್​ನ ಸಂಜಯ ಪ್ರಕಾಶ ಕೊಟಾರಿ, ದುರ್ಗಾ ಡೆವಲಪರ್ಸ್​ನ ಹನುಮಂತಪ್ಪ ಮ್ಯಾಗೇರಿ, ಬಿ.ಎಂ. ಅಸೋಸಿಯೇಟ್ಸ್​ನ ಬಿ. ಮಹೇಶ, ಲಕ್ಷ್ಮೀ ನಾರಾಯಣ ಕನ್​ಸ್ಟ್ರಕ್ಷನ್​ನ ಜಗನ್ನಾಥ ಚಾಟ್ನಿ, ಸನ್​ಸಿಟಿ ಡೆವಲಪರ್ಸ್​ನ ನಾರಾಯಣ ಆಚಾರ್ಯ, ಅಚಲ ಡೆವಲಪರ್ಸ್​ನ ಅಚಲದಾಸ ರೇವಣಕರ, ವಕೀಲ ಸದಾನಂದ ದೊಡ್ಡಮನಿ, ಕೃಷ್ಣಾ ಬದ್ದಿ ಇತರರಿದ್ದರು.


ಉಪನೋಂದಣಾಧಿಕಾರಿ ಸೌಮ್ಯಲತಾ ಬಿಲ್ಡರ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ಸುರಿದು ಅಪಾರ್ಟಮೆಂಟ್, ಕಟ್ಟಡ ಕಟ್ಟಿರುತ್ತೇವೆ. ನೋಂದಣಿ ಕೆಲಸ ಸಲೀಸಾಗಿ ನಡೆಯದಿದ್ದರೆ ವ್ಯವಹಾರಕ್ಕೆ ತೊಂದರೆಯಾಗುತ್ತದೆ. ಈ ಸಮಸ್ಯೆ ಬಗ್ಗೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
| ವೀರೇಶ ಉಂಡಿ ದುರ್ಗಾ ಡೆವಲಪರ್ಸ್ ಮುಖ್ಯಸ್ಥ

ಕೇವಲ 3 ಕಂಪ್ಯೂಟರ್ ನಾಲ್ವರು ಸಿಬ್ಬಂದಿ
ಉತ್ತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇಬ್ಬರು ಉಪ ನೋಂದಣಾಧಿಕಾರಿಗಳು ಸೇರಿ ಕೇವಲ ನಾಲ್ವರು ಕಾಯಂ ಸಿಬ್ಬಂದಿ ಇದ್ದಾರೆ. ಉಳಿದವರೆಲ್ಲ ಗುತ್ತಿಗೆ ನೌಕರರು. ಕೋಟ್ಯಂತರ ರೂ. ಆದಾಯ ತಂದುಕೊಡುವ ಈ ಕಚೇರಿಯಲ್ಲಿ ಕೇವಲ ಮೂರು ಕಂಪ್ಯೂಟರ್​ಗಳಿವೆ. ಇದರಿಂದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಸರ್ಕಾರ ಈ ಕೂಡಲೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ವಕೀಲ ಸದಾನಂದ ದೊಡ್ಡಮನಿ ಆಗ್ರಹಿಸಿದರು.


1 ವಾರ ನೋಂದಣಿ ಸ್ಥಗಿತ
ಒಂದು ವಾರ ಯಾವುದೇ ನೋಂದಣಿ ಕಾರ್ಯ ಮಾಡದಿರುವ ಮೂಲಕ ಪ್ರತಿಭಟನೆ ಮುಂದುವರಿಸಲು ಕ್ರೆಡೈ, ಬಾಂಡ್ ರೈಟರ್ ಅಸೋಸಿಯೇಶನ್ ನಿರ್ಧರಿಸಿವೆ.

62 ಕೋಟಿ ರೂ. ಆದಾಯ!
ಹುಬ್ಬಳ್ಳಿಯು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಕಳೆದ ಮೂರು ವರ್ಷಗಳಲ್ಲಿ 12644 ದಸ್ತಾವೇಜುಗಳು ನೋಂದಣಿಯಾಗಿದ್ದು, ಬರೋಬ್ಬರಿ 62,92,00,000 ರೂ. ಆದಾಯ ಬಂದಿದೆ. ಇದರಲ್ಲಿ ಅರ್ಧದಷ್ಟು ಕ್ರೆಡೈ ಡೆವಲಪರ್​ಗಳ ಮೂಲಕ ನೋಂದಣಿಯಾಗಿದೆ. ಇಷ್ಟೆಲ್ಲ ಆದಾಯ ನೀಡುವ ಗ್ರಾಹಕರಿಗೆ ಇಲ್ಲಿ ಬೆಲೆ ಇಲ್ಲದಾಗಿದೆ. ಉಪನೋಂದಣಾಧಿಕಾರಿಗಳು ತಮ್ಮದೇ ಆದ ವಿಚಿತ್ರ ನಿಯಮಗಳಿಂದ ಜನರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಕ್ರೆಡೈ ಹು-ಧಾ ಘಟಕದ ಅಧ್ಯಕ್ಷ ಸಾಜಿದ್ ಪರಾಶ ಆರೋಪಿಸಿದರು.

ಒಂದು ದಾಖಲೆ ನೋಂದಣಿಗೆ ನಾಲ್ಕೈದು ದಿನ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಸಲ್ಲದ ಕಾರಣಗಳನ್ನು ಹೇಳಿ ತಡ ಮಾಡುತ್ತಿದ್ದಾರೆ. ಆದಾಯ ತರುವ ಇಲಾಖೆಯಲ್ಲಿ ಸರಿಯಾದ ಸೌಲಭ್ಯವಿಲ್ಲ. ಆಧಾರ್ ಕಾರ್ಡ್ ತಂದಿದ್ದರೂ ಪೂರ್ತಿ ಆಧಾರ್ ಕಾರ್ಡ್ ತನ್ನಿ ಎಂದು ಸತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಷ್ಟು ಭ್ರಷ್ಟಾಚಾರ ಇಲ್ಲಿ ತಾಂಡವವಾಡುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು.| ಪ್ರದೀಪ ರಾಯ್ಕರನಿಯೋಜಿತ ಅಧ್ಯಕ್ಷ, ಕ್ರೆಡೈ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net