ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

18 SRS 3
Published on

ಶಿರಸಿ: ಮೈಸೂರು ಮುಡಾ ಹಗರಣ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು. ರಾಜೀನಾಮೆಗೂ ಮುನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ  ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಡಾ ಹಗರಣವು ಮಹತ್ವದ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯವು (ಇಡಿ) 300 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದಿದ್ದಾರೆ. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದ್ದು, ಇದು ಜನತೆಗೆ ಮಾಡಿದ ದ್ರೋಹವಾಗಿದೆ.<

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ. ಪ್ರಕರಣದ ದಿಕ್ಕು ತಪ್ಪಿಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರ ಮೇಲೆ ಆರೋಪ ಹೊರಿಸಿ, ಬಂಧಿಸುವ ಹಂತಕ್ಕೂ ರಾಜ್ಯ ಸರ್ಕಾರ ಹೋಗಿತ್ತು. ಇಡಿ ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಇಷ್ಟಾಗಿಯೂ ಅಧಿಕಾರದಲ್ಲಿ ಮುಂದುವರೆಯುವುದು ಸಿದ್ದರಾಮಯ್ಯ ಅವರ ಭಂಡತನಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರದಾಹ ಬಿಟ್ಟು, ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net