

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತ್ತೆ ‘ದಲಿತ ಮುಖ್ಯಮಂತ್ರಿ’ ಕೂಗು ಕೇಳಿ ಬರಲು ಪ್ರಾರಂಭವಾಗಿದೆ. ರಾಜ್ಯ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಎಸ್‌ಸಿ, ಎಸ್‌ಟಿ ಸಮುದಾಯದ ಸ್ವಾಮೀಜಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ದಲಿತ ಮುಖ್ಯಮಂತ್ರಿ ಬೇಡಿಕೆ ಕೇಳಿ ಬಂತು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಿವಿಧ ಜಾತಿಗಳಾಗಿ ಹರಿದು ಹಂಚಿ ಹೋಗಿದ್ದಾರೆ. ಎಲ್ಲ ಜಾತಿಗಳು ಒಗ್ಗೂಡಿದರೆ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಾಯಿಸಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ತಮ್ಮ ಸ್ಪರ್ಧೆಯನ್ನು ಕೇವಲ ಮೀಸಲು ಕ್ಷೇತ್ರಕ್ಕೆ ಸೀಮಿತಗೊಳಿಸದೆ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿ ಬಂತು.
ಸಿಎಂ ಪಟ್ಟ ಪಡೆಯಬೇಕು: ನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಸಂವಿಧಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಶೋಷಿತ ಸಮುದಾಯದವರಲ್ಲಿ ಜಾಗೃತಿ ಮೂಡಬೇಕಾಗಿದೆ. ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನವನ್ನು ನಾವು ಬೇರೆಯವರಿಗೆ ನೀಡುವ ಮೂಲಕ ನಾವು ಇಂದಿಗೂ ಶೋಷಣೆಗೆ ಗುರಿಯಾಗುತ್ತಿದ್ದೇವೆ. ಈ ಶೋಷಣೆಯಿಂದ ವಿಮೋಚನೆ ಹೊಂದಲು ನಾವು ಮುಖ್ಯಮಂತ್ರಿ ಪಟ್ಟವನ್ನು ಪಡೆಯಲು ಶ್ರಮಿಸಬೇಕು ಕರೆ ನೀಡಿದರು.
ಲೇಖಕ ಎಂ. ಗೋಪಿನಾಥ್ ಮಾತನಾಡಿ, ದೇಶದ ಮೂಲ ನಿವಾಸಿಗಳು ದೇಶದ ಯಜಮಾನರಾಗಬೇಕಾಗಿತ್ತು. ಆದರೆ, ಏತಕ್ಕೆ ಅವರು ಗುಲಮರಾದರು ಎಂಬುದು ಬಹಳ ಮುಖ್ಯ. ಶಿಕ್ಷಣ ಮನುಷ್ಯನನ್ನು ಸ್ವಾಭಿಮಾನಿಯನ್ನಾಗಿಸುತ್ತದೆ. ಶಿಕ್ಷಣ ವಂಚಿತರಾದ ಸಮುದಾಯ ಶೋಷಣೆಗೆ ಗುರಿಯಾಯಿತು. ಈ ಕಾರಣಕ್ಕೆ ಶೋಷಿತ ಸಮುದಾಯದವರಲ್ಲಿ ಸ್ವಾಭಿಮಾನ ತುಂಬಲು ಜ್ಯೋತಿ ಬಾಫುಲೆ, ಶಾಹು ಮಹಾರಾಜ್ ಶೋಷಿತರಿಗೂ ಶಿಕ್ಷಣ ದೊರೆಯುವಂತೆ ಮಾಡಿದರು ಎಂದು ಹೇಳಿದರು.
ವೇದಿಕೆಯಲ್ಲಿ ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀ ಛಲವಾದಿ ಗುರುಪೀಠದ ಜಗದ್ಗುರು ಬಸವನಾಗಿ ದೇವ ಸ್ವಾಮೀಜಿ, ಶ್ರೀ ಬಂಜಾರ ಗುರುಪೀಠದ ಶ್ರೀ ಸಂತ ಸೇವಾಲಾಲ್ ಸ್ವಾಮೀಜಿ, ಶ್ರೀ ಮುಡುಕುತೊರೆ ಮಠದ ಶ್ರೀ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಶ್ರೀ ಭೋವಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದರು.