ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

COW
Published on

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಬಳಿ ಗೋವನ್ನು ಕಡಿದು ತಲೆ ಭಾಗವನ್ನು ರಸ್ತೆ ಪಕ್ಕ ಎಸೆದ ಘಟನೆಗೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಖಂಡಿಸಿ ಹಿಂದು ಜಾಗರಣಾ ವೇದಿಕೆಯ ಶಿರಸಿ ಘಟಕದಿಂದ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.

ಹಿಂದುಗಳಿಗೆ ಪವಿತ್ರವಾಗಿರುವ, ನಿತ್ಯ ಪೂಜಿಸುವ ಗೋವಿನ ತಲೆಯನ್ನು ಕಡಿದಿರುವುದು ಖಂಡನೀಯ. ಗೋವು ಸಮಸ್ತ ಹಿಂದುಗಳಿಗೆ ಪೂಜನೀಯವಾಗಿದ್ದು, ಮುಕ್ಕೋಟಿ ದೇವರ ಸ್ವರೂಪವಾಗಿ ನಾವು ಗೋವನ್ನು ಪೂಜಿಸುತ್ತೇವೆ. ದುಷ್ಕರ್ಮಿಗಳು, ಸಮಾಜ ಘಾತುಕರು ಹಿಂದುಗಳ ಪವಿತ್ರ ಗೋವನ್ನು ಹತ್ಯೆಗೈಯ್ಯುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದಲ್ಲಿದ್ದಾರೆ.

ಗೋವು ಹಿಂದುಗಳ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ದುಷ್ಕೃತ್ಯ ಎಸಗಿದ ದುರುಳರನ್ನು ಕೂಡಲೇ ಬಂಧಿಸಬೇಕು. ಮುಂದೆ ಎಲ್ಲಿಯೂ ಇಂತಹ ದುರ್ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ಇಂತಹ ಸಮಾಜ ಘಾತುಕ ದುಷ್ಟಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


ವೇದಿಕೆ ಶಿರಸಿ ಸಂಚಾಲಕ ಹರೀಶ ಕರ್ಕಿ, ಸತೀಶ ನಾಯ್ಕ, ನಂದನ ಸಾಗರ, ಕಿರಣ ದಾವಣಗೆರೆ, ಮಂಜು ಪಡ್ಡಿ, ಹರೀಶ ಪಟಗಾರ್, ದಿನೇಶ ಮೊಗೇರ್, ಕಮಲಾಕರ ಹನೇಹಳ್ಳಿ, ಭಜರಂಗದಳದ ಅಮಿತ್ ಶೇಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net