

ಮುಂಡರಗಿ: ಬಿತ್ತನೆ ಮಾಡಿ ಐದಾರು ದಿನ ಕಳೆದರೂ ಮಳೆಯಾಗದೆ ಬೆಳೆಗೆ ತೇವಾಂಶದ ಕೊರತೆ ಕಾಡುತ್ತಿದೆ. ಇದರಿಂದ ಪಾರಾಗಲು ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುವ ಮೂಲಕ ಬೆಳೆ ಉಳಿಸಿಕೊಳ್ಳಲು ತಾಲೂಕಿನ ಮೇವುಂಡಿ ಗ್ರಾಮದ ರೈತರೊಬ್ಬರು ಮುಂದಾಗಿದ್ದಾರೆ.
ರೈತ ಮುದ್ಲಿಂಗಪ್ಪ ಕೊರ್ಲಹಳ್ಳಿ ಅವರು ತಮ್ಮ 10 ಎಕರೆ ಜಮೀನಿನಲ್ಲಿ ಐದಾರು ದಿನಗಳ ಹಿಂದೆ ಸಾವಿರಾರು ರೂಪಾಯಿ ವ್ಯಯಿಸಿ ಉಳ್ಳಾಗಡ್ಡಿ ಬೀಜ ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ಮಾಡಿ ಐದಾರು ದಿನಗಳಾದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಬಿತ್ತಿದ ಉಳ್ಳಾಗಡ್ಡಿ ಬೀಜ ಭೂಮಿಯಲ್ಲಿ ಹಾಳಾಗುತ್ತದೆ ಎಂಬ ಆತಂಕದಲ್ಲಿ ಟ್ಯಾಂಕರ್ ಮೂಲಕ ಬೆಳೆಗೆ ನೀರುಣಿಸುತ್ತಿದ್ದಾರೆ.
ಮುಂಗಾರು ಪ್ರಾರಂಭದಲ್ಲಿ ಸುರಿದ ಮಳೆಯಿಂದಾಗಿ ತಮ್ಮ ಹೊಲದಲ್ಲಿನ ಅರ್ಧ ಎಕರೆ ಪ್ರದೇಶದಲ್ಲಿರುವ ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿತ್ತು. ಹೀಗಾಗಿ ಜನರೇಟರ್ ಸಹಾಯದಿಂದ ಕೃಷಿ ಹೊಂಡದಿಂದ ಟ್ಯಾಂಕರ್ನಲ್ಲಿ ನೀರು ಸಂಗ್ರಹಿಸಿಕೊಂಡು ಹೊಲಕ್ಕೆ ಸಿಂಪಡಿಸುತ್ತಿದ್ದಾರೆ. ಬಿತ್ತಿರುವ ಅಲ್ಪಸ್ವಲ್ಪ ಬೆಳೆಯಾದರೂ ಉಳಿಸಿಕೊಳ್ಳುವ ಹಂಬಲ ಅವರದು.
ದಿನಕ್ಕೆ 1 ಸಾವಿರ ರೂ. ಜನರೇಟರ್ ಬಾಡಿಗೆ, 1,500 ರೂ. ಟ್ಯಾಂಕರ್ ಬಾಡಿಗೆ, 1,500 ರೂ. ಕೂಲಿ ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆಗೆ ನೀರುಣಿಸುತ್ತಿದ್ದೇವೆ. ಗ್ರಾಮದ ಕೆಲ ಭಾಗದಲ್ಲಿ ಮಳೆಯಾದರೆ, ನಮ್ಮ ಭಾಗದಲ್ಲಿ ಮಳೆಯಾಗದೆ ತೇವಾಂಶವಿಲ್ಲದೆ ಬೆಳೆ ಬಾರದ ಸ್ಥಿತಿಗೆ ತಲುಪಿದ್ದರಿಂದ ಬೆಳೆ ಉಳಿಸಿಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. | ಮುದ್ಲಿಂಗಪ್ಪ ಕೊರ್ಲಹಳ್ಳಿ ಮೇವುಂಡಿ ರೈತ