

ಲಕ್ಷ್ಮೇಶ್ವರ: ತಹಸೀಲ್ದಾರ್ ಅವರು ಕಿತ್ತೂರ ಚನ್ನಮ್ಮಳ ಜಯಂತಿ ಮತ್ತು ವಿಜಯೋತ್ಸವ ಆಚರಣೆಯನ್ನು ನಿರ್ಲಕ್ಷಿಸಿ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೆ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಪಂಚಮಸಾಲಿ ಸಮಾಜದವರು ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಚನ್ನಮ್ಮನ ಜಯಂತಿ ಆಚರಣೆ ಮಾಡಿಲ್ಲ ಎಂಬ ಸುದ್ದಿ ಹರಡಿದ ನಂತರ ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ. ಅಲ್ಲದೆ, ತಹಸೀಲ್ದಾರ್ ಅವರು ಸ್ಥಳೀಯವಾಗಿಯೇ ಇದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಮತ್ತು ಈ ಬಗ್ಗೆ ಪೂರ್ವಭಾವಿ ಸಭೆಯನ್ನೂ ಮಾಡಿಲ್ಲ, ಯಾರೊಬ್ಬರನ್ನೂ ಆಹ್ವಾನಿಸಿಲ್ಲ. ಎಂದು ಪ್ರತಿಭಟನಾಕಾರರು ದೂರಿದರು.
ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ತಹಸೀಲ್ದಾರ್ ಅವರು ಸರ್ಕಾರದ ಆದೇಶ ಧಿಕ್ಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ಕಿತ್ತೂರ ರಾಣಿ ಚನ್ನಮ್ಮಾಜಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ಕರವೇ (ನಾರಾಯಣಗೌಡ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಸಂಗೊಳ್ಳಿ ರಾಯಣ್ಣ ವೇದಿಕೆಯ ಮಂಜು ಮುಳಗುಂದ, ಪ್ರಕಾಶ ಮಾದನೂರ, ಲೋಕೇಶ ಸುತಾರ, ಹೊನ್ನಪ್ಪ ವಡ್ಡರ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ, ಗ್ರಾಪಂ ಸದಸ್ಯ ಮಂಜುನಾಥ ಗೌರಿ ಅನೇಕರು ತಹಸೀಲ್ದಾರ ಅಮಾನತಿಗೆ ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಆರ್.ಕೆ ಅವರು ತಹಸೀಲ್ದಾರ್‌ಗೆ ನೋಟಿಸ್ ನೀಡಲಾಗುವುದು ಎಂದು ಸಮಜಾಯಿಸಿ ನೀಡಿದರೂ ಪ್ರತಿಭಟನಾಕಾರರು ಸಮಾಧಾನವಾಗಲಿಲ್ಲ. ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದರು.
ಎಫ್.ವಿ. ಮರಿಗೌಡರ, ಈರಣ್ಣ ಕರಿಬಿಷ್ಠಿ, ಬಸವರಾಜ ತುಳಿ, ಸೋಮಣ್ಣ ಡಾಣಗಲ್, ಶರಣಪ್ಪ ಹೊಂಬಳ, ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಹೊನ್ನಪ್ಪ ವಡ್ಡರ, ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ನೀಲಪ್ಪ ಕರ್ಜೆಕಣ್ಣವರ, ಶಂಕರ ಬ್ಯಾಡಗಿ, ಮಾದೇವಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ನೀರಾಲೋಟಿ, ನಿಂಗಪ್ಪ ಪ್ಯಾಟಿ, ಮುದ್ದಣ್ಣ ಸಾಲಮನಿ, ಚನ್ನಪ್ಪ ಕರಿಯತ್ತಿನ, ರಾಜು ಲಿಂಬಿಕಾಯಿ, ಶಿವು ಕಟಗಿ, ಚಂದ್ರು ಮಾಗಡಿ ಇತರರಿದ್ದರು.