

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು, ಹೊರಿ, ಕರುಗಳು)ಗಳ ಬಲಿ, ಕುರ್ಬಾನಿ ಹತ್ಯೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ವಿಶ್ವಹಿಂದು ಪರಿಷದ್, ಬಜರಂಗದಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದುಪಡಿ 1975) ಜಾರಿಯಲ್ಲಿದ್ದು, ಅದರ ಪ್ರಕಾರ ಗೋವಂಶಗಳ ಬಲಿ, ಕುರ್ಬಾನಿ ಹತ್ಯೆ ನಿಷೇಧಿಸಲಾಗಿದೆ. ಜೂ. 7ರಿಂದ 9ರವರೆಗೆ ಕುರ್ಬಾನಿ ಸಾಧ್ಯತೆ ಇದ್ದು, ಈ ದಿನಗಳಂದು ಗೋವಂಶ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುರ್ಬಾನಿ ನಿಷೇಧದ ಬಗ್ಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿ. ನಾವು ದೇವರೆಂದು ಪೂಜಿಸುವ ಗೋವಂಶದ ಬಲಿ, ಕುರ್ಬಾನಿ, ಹತ್ಯೆ, ಹಿಂಸೆ ಆದರೆ ಹಿಂದೂ ಸಮಾಜ ಸಹಿಸುವುದಿಲ್ಲ. ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗದಳ ಸಂಯೋಜಕ ಶಿವಾನಂದ ಸತ್ತಿಗೇರಿ, ವಿಶ್ವ ಹಿಂದು ಪರಿಷದ್ ಕಾರ್ಯದರ್ಶಿ ಅನುದೀಪ ಕುಲಕರ್ಣಿ, ಗುರುಶಾಂತ ಹಿರೇಮಠ, ಸೋಮಶೇಖರ ಚನ್ನಶೆಟ್ಟಿ, ಇತರರು ಇದ್ದರು.