

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು ಸೇರಿದಂತೆ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಶೇ.50 ಪೇಮೆಂಟ್ ಕೋಟಾ ರದ್ದುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ದಾವಣಗೆರೆ ಬಂದ್ ಬೆಂಬಲಿಸಿ ನಗರದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಒಂದು ತಿಂಗಳಿಂದ ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ಉಳಿಸಿಕೊಳ್ಳಲು ಹೋರಾಟ ನಡೆಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆದ ಯುಬಿಡಿಟಿಯಲ್ಲಿ ಶೇ.50 ಸೀಟುಗಳಲ್ಲಿ ಶುಲ್ಕ ಏರಿಕೆ ಮಾಡಿ, ವಿದ್ಯಾರ್ಥಿಗಳಿಂದ 97 ಸಾವಿರ ರೂ. ಪಡೆಯಲು ನಿರ್ಧರಿಸಲಾಗಿದೆ ಎಂದು ದೂರಿದರು.
ದೇಶದ ಯಾವುದೇ ಸರ್ಕಾರದ ದೇಣಿಗೆಯಿಂದ ನಡೆಯುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಮಾಣದ ಶುಲ್ಕ ಪಡೆಯುವ ನಿರ್ವಹಣಾ ಕೋಟಾದ ಸೀಟುಗಳ ಸಂಖ್ಯೆಯೇ ಇಲ್ಲ. ಸರ್ಕಾರಿ ಇಂಜಿನಿಯರಿಂಗ್ ಶುಲ್ಕವೇ 43 ಸಾವಿರದಷ್ಟಿದ್ದು, ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಕಾಲೇಜು ಒಂದರಲ್ಲೇ 97 ಸಾವಿರ ರೂ. ಶುಲ್ಕ ಪಡೆಯುವುದು ವಿದ್ಯಾರ್ಥಿಗಳ ಮೇಲೆ ಹೊರೆಯಾಗಲಿದೆ. ಜನ ಮನ್ನಣೆಗೆ ಮಣಿದು ಎನ್‌ಇಪಿ-2020ನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಆದರೀಗ ಎನ್‌ಇಪಿ ಭಾಗವೇ ಆಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆ, ಅನುದಾನ ಕಡಿತ ಹಾಗೂ ವಿದ್ಯಾರ್ಥಿಗಳ ಶುಲ್ಕದಲ್ಲಿ ಕಾಲೇಜು ನಿರ್ವಹಣೆ ಇವುಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವುದು ವಿಷಾದನೀಯ ಎಂದು ಕಿಡಿಕಾರಿದರು.
ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಹೆಚ್ಚುವರಿ ಶುಲ್ಕ ಕೈಬಿಡಬೇಕು. ಈ ವರ್ಷ ಪಡೆದಿರುವ ಹೆಚ್ಚುವರಿ ಹಣ ಹಿಂದಿರುಗಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ರಾಜ್ಯದ ಎಲ್ಲ ಸರ್ಕಾರಿ ಹಾಗೂ ವಿವಿ ಅಡಿಯಲ್ಲಿ ಬರುವ ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು ಎಂದು ಒತ್ತಾಯಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಚಂದನ, ಹೇಮಾ, ಚಂದ್ರಿಕಾ, ದಿಶಾ, ಅಂಜಲಿ, ಅಭಿಷೇಕ್, ಬೀರಪ್ಪ, ವಿದ್ಯಾರ್ಥಿಗಳಾದ ಅಭಿಷೇಕ್, ನಂದೀಶ್, ನರಸಿಂಹ, ನಾರಾಯಣ, ನಿತ್ಯ, ರಕ್ಷಿತಾ, ವಿಜಯ್ ಇತರರು ಇದ್ದರು.