

ಹುಬ್ಬಳ್ಳಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಕುರಿಗಾರರ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಲು ಆಗ್ರಹಿಸಿ ಪ್ರದೇಶ ಕುರುಬ ಸಮಾಜ ಒಕ್ಕೂಟದಿಂದ ನಗರದಲ್ಲಿ ಗುರುವಾರ ನೂರಾರು ಕುರಿಗಳೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದರು.
ನೂರಾರು ಕುರಿಗಳೊಂದಿಗೆ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಕಳೆದ ನಾಲ್ಕೈದು ದಶಕಗಳಿಂದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ಆಗ್ರಹಿಸಲಾಗುತ್ತಿದೆ. ಎಲ್ಲ ಸರ್ಕಾರಗಳು ಅನ್ಯಾಯ ಮಾಡುತ್ತಲೇ ಬಂದಿವೆ. ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕುರುಬರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ರಲ್ಲಿ ಕುರುಬ ಸಮಾಜದ ಮಠಾಧೀಶರು, ಹೋರಾಟಗಾರರ ಸಭೆ ಕರೆದು ಮೀಸಲಾತಿ ಕೊಡುವುದಾಗಿ ಹೇಳಿದ್ದರು. ಆದರೆ, ಅದರಂತೆ ನಡೆದುಕೊಂಡಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆಯಾದ ಪತ್ರವನ್ನು ಕೊಡದೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಯಿತು. ಹೀಗಾಗಿ ಈ ವರದಿಯನ್ನು ತಿರಸ್ಕಾರ ಮಾಡಲಾಯಿತು. ಇದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡ ಅನ್ಯಾಯ ಮಾಡುತ್ತಿದೆ. ಇದು ಸರಿಯಲ್ಲ. ಕೂಡಲೇ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುರುಬ ಸಮಾಜಕ್ಕೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮುಂಬರುವ ಜಿಪಂ, ತಾಪಂ ಚುನಾವಣೆ ಪೂರ್ವದಲ್ಲಿ ಮೀಸಲಾತಿ ಪತ್ರವನ್ನು ಕೇಂದಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದರ ಜತೆಗೆ ಪಶುಪಾಲಕರ, ಕುರಿಗಾರರ ಮೇಲೆ ದೌರ್ಜನ್ಯ, ಹಲ್ಲೆ ಹೆಚ್ಚಾಗಿದೆ. ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಬಿಡುತ್ತಿಲ್ಲ. ಹೀಗಾಗಿ ಪಶುಪಾಲಕರ, ಕುರಿಗಾರರ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ರವಿರಾಜ ಕಂಬಳಿ, ಚಂದ್ರಶೇಖರ ಕಣವಿ, ಶಿವರಾಜ ಸಾವಕಾರ, ರವಿ ಕಟ್ಟಿಮನಿ, ಹನುಮಂತ ಕಂಬಳಿ,ನವೀನ ಜಂಗಣ್ಣವರ, ಕೆ.ಕೆ. ಪಾಟೀಲ, ಎಚ್.ಕೆ. ದೊಡ್ಡಮನಿ, ಮಹಾಂತೇಶ ಈಟಿ, ಶಿವು ಕಲಕನಮರಡಿ ಇತರರು ಭಾಗವಹಿಸಿದ್ದರು.