

ಗುರುಪುರ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸ್ಪೀಕರ್ ಯು.ಟಿ.ಖಾದರ್ ಈಗ ಪ್ರಕರಣದ ಪ್ರಧಾನ ಸೂತ್ರಧಾರ ಫಾಝಿಲ್ ಸಹೋದರನೊಂದಿಗೆ ಮಾತನಾಡಿ, ಆತನ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಿದ್ದು, ತನಿಖೆ ಹಾದಿ ತಪ್ಪಿಸುವ ಕೆಲಸ ನಡೆದಿದೆ. ಆದ್ದರಿಂದ ಖಾದರ್ ತಕ್ಷಣ ರಾಜೀನಾಮೆ ನೀಡಿ ಸ್ಪೀಕರ್ ಪೀಠದ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದರು.
ಕಾವೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ಫಾಝಿಲ್ ಸಹೋದರ ಭಾಗಿಯಾಗಿದ್ದಾನೆ ಎಂದು ಗೃಹ ಸಚಿವ ಡಾ.ಪರಮೇಶ್ವರ, ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇಷ್ಟಿದ್ದ ಮೇಲೂ ಫಾಝಿಲ್, ಆತನ ಕುಟುಂಬಿಕರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಖಾದರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ಹೇಗೆ ಎಂದು ಪ್ರಶ್ನಿಸಿದರು.
ಕೊಲೆ ಪ್ರಕರಣದ ಮೊಬೈಲ್ ಚಿತ್ರೀಕರಣ ನಡೆಸಿರುವ ಮಹಿಳೆ ಯಾರು? ಅದರಲ್ಲಿ ಆಕೆ ಬ್ಯಾರಿ ಭಾಷೆಯಲ್ಲಿ ಉದ್ಗರಿಸುತ್ತಿರುವುದು ಕೇಳಿಸುತ್ತದೆ. ಸ್ಥಳದಲ್ಲಿ ಆಕೆಯೊಂದಿಗೆ ಒಂದಕ್ಕಿಂತ ಹೆಚ್ಚು ಮಹಿಳೆಯರು ಇದ್ದರು ಎಂಬುದು ಸ್ಪಷ್ಟ. ಆ ಮಹಿಳೆಯರನ್ನು ಸೆರೆ ಹಿಡಿದು ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆಯಿಂದ ಕೊಲೆ ಪ್ರಕರಣದಲ್ಲಿರುವ ಮಹಿಳೆಯರ ಬಣ್ಣ ಬಯಲಾಗಲಿದೆ. ಸಾಕ್ಷೃ ನಾಶವಾಗದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಮರ ಓಲೈಕೆಗಾಗಿ ಸಭೆ
ಮತೀಯವಾದಿಗಳಿಂದ ಸುಹಾಸ್ ಶೆಟ್ಟಿ ಹತ್ಯೆಗೀಡಾದ ಬಳಿಕ ದ.ಕ. ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದರೂ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಗೆ ಆಗಮಿಸಿದ ತಕ್ಷಣ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ ಎಂಬುದು ತೀರ ನಾಚಿಗೆಗೇಡಿನ ಸಂಗತಿ ಎಂದು ಡಾ.ಭರತ್ ಶೆಟ್ಟಿ ಸರ್ಕಾರದ ನಡೆಗೆ ಟೀಕೆ ವ್ಯಕ್ತಪಡಿಸಿದರು.
ಸ್ಥಳೀಯ ಸಂಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿರುವುದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ಓಲೈಕೆ ನೀತಿ ಮತ್ತೊಮ್ಮೆ ಜಾಹೀರುಗೊಂಡಂತಾಗಿದೆ. ಸ್ಥಿತಿ ಹೀಗಿರುವಾಗ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹಿಂದು ಸಮಾಜ ನ್ಯಾಯ ನಿರೀಕ್ಷಿಸಲು ಸಾಧ್ಯವಿದೆಯೇ? ಸ್ಥಳೀಯ ಸಂಸದರು, ಶಾಸಕರಿಗೆ ಮಾಹಿತಿ ನೀಡದೆ ಕೇವಲ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಲು ಕಾರಣವೇನು ಎಂದು ಪ್ರಶ್ನಿಸಿದರು.
'ಫಾಝಿಲ್ ಸಹೋದರನ ಜತೆ ಮಾತನಾಡಿದ್ದೇನೆ’ ಎಂದು ಖಾದರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆರೋಪಿ ಪೊಲೀಸ್ ವಶದಲ್ಲಿರುವಾಗ ಖಾದರ್ ಮಾತನಾಡಿದ್ದು ಹೇಗೆ? ಇದಕ್ಕೆ ಪೊಲೀಸರು ಅವಕಾಶ ಮಾಡಿರುವುದು ಹೇಗೆ? ಸ್ವಜಾತಿ ಬಂಧುಗಳ ಪರವಾಗಿ ನಿಂತಿರುವ ಖಾದರ್ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕೇಸ್‌ನಲ್ಲಿ ಸ್ಪೀಕರ್ ಪಾತ್ರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕಿದ್ದರೆ ಸ್ಪೀಕರ್ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಸಾಧ್ಯತೆ ಹೆಚ್ಚಿದೆ. ಡಾ.ಭರತ್ ಶೆಟ್ಟಿ, ಮಂಗಳೂರು ಉತ್ತರ ಶಾಸಕ