

ಮಂಡ್ಯ: ಕನ್ನಡಿಗರನ್ನು ಗೂಂಡಾಗಳು ಮತ್ತು ಭಯೋತ್ಪಾದಕರು ಎಂದು ಅವಮಾನಿಸಿರುವ ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ದೂರು ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ ಅವರಿಗೆ ದೂರು ಸಲ್ಲಿಸಿದ ಸೇನೆಯ ಕಾರ್ಯಕರ್ತರು ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಗೂಂಡಾಗಳು ಮತ್ತು ಭಯೋತ್ಪಾದಕರು ಎಂದು ಅವಮಾನಿಸಿದ್ದಾರೆ. ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವ ಹುನ್ನಾರ ನಡೆಯುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರನ್ನು ನಿಂದಿಸಿರುವ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು. ಕರ್ನಾಟಕದ ಜನಪ್ರತಿನಿಧಿಗಳು ಮೌನ ಮುರಿದು ಮಾತನಾಡಬೇಕು. ಮೂರು ಸಾವಿರ ವರ್ಷ ಹಾಗೂ ದೇಶದ ಎಲ್ಲ ಭಾಷೆಯ ತಾಯಿ ಭಾಷೆ ಕನ್ನಡಕ್ಕೆ ಅವಮಾನಿಸಿದ ಯಾವುದೇ ವ್ಯಕ್ತಿಯಾದರೂ ನಿಂದಿಸಿದರೆ ಅಂತವರ ವಿರುದ್ಧ 24 ತಾಸಿನೊಳಗೆ ಕಾನೂನು ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ಆರ್.ಸೌಭಾಗ್ಯಾ, ಶಿವಾಲಿ, ಅಭಿಷೇಕ್, ಪವಿತ್ರಾ ನಾಗರಾಜ್, ವೇಣು ಇತರರಿದ್ದರು.