ಸೋನಿಯಾ, ರಾಹುಲ್ ಬಂಧನಕ್ಕೆ ಆಗ್ರಹ

9
Published on

ಮೈಸೂರು: ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ಗಾಂಧಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ರಾಮಸ್ವಾಮಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಯಿತು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣ ದೇಶದಲ್ಲಿ ದೊಡ್ಡ ಹಗರಣವಾಗಿದೆ. ಈ ಹಗರಣ ಕಾಂಗ್ರೆಸ್ ದೇಶಕ್ಕೆ ಮಾಡಿದ ದ್ರೋಹ ಎಂದು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಜನತೆ, ಕಾಂಗ್ರೆಸ್ ಅನ್ನು ನಂಬಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ವಿಶ್ವಾಸದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಜನರು ಹೂಡಿಕೆ ಮಾಡಿದ ಹಣವನ್ನು ಕಾಂಗ್ರೆಸ್ ತನ್ನದೇ ಕುಟುಂಬದ ಚಾರಿಟಬಲ್ ಟ್ರಸ್ಟ್‌ಗೆ ವರ್ಗಾಯಿಸಿ ದೇಶಕ್ಕೆ ವಿಶ್ವಾಸದ್ರೋಹ ಮಾಡಿದೆ ಎಂದರು.

ಈ ದ್ರೋಹವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಾರದು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಇಂತಹ ಸಂವಿಧಾನ ವಿರೋಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಯುವ ಮೋರ್ಚಾ ಅಧ್ಯಕ್ಷ ರಾಕೇಶ್‌ಗೌಡ ಮಾತನಾಡಿ, ನೆಲದಿಂದ ಆಕಾಶದವರೆಗೆ ಅನೇಕ ಭ್ರಷ್ಟಾಚಾರ ಮಾಡಿ ದೇಶ ಲೂಟಿ ಮಾಡಿರುವ ಕಾಂಗ್ರೆಸ್‌ನವರು ಇಡೀ ದೇಶವನ್ನು ನುಂಗಿ ನೀರು ಕುಡಿಯಲು ಹೊರಟಿದೆ. ಒಂದು ವರ್ಗದ ಜನತೆಯ ಓಲೈಕೆಗಾಗಿ ದೇಶವನ್ನೇ ಭ್ರಷ್ಟಾಚಾರ ಕೂಪವಾಗಿ ಮಾಡಿಸಿದವರು. ಈಗ ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಎಂತಹ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ಲೋಹಿತ್, ಸಚಿನ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ಬಿ.ಎಂ.ರಘು, ಉಪಾಧ್ಯಕ್ಷ ಜೋಗಿ ಮಂಜು, ಮಂಡಲಗಳ ಯುವ ಮೋರ್ಚಾ ಅಧ್ಯಕ್ಷರಾದ ಮಧು, ಅರ್ಜುನ್, ಮೋಹನ್, ನಿಶಾಂತ್, ಮೃಗಾಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಶಿವಕುಮಾರ್, ಮಂಡಲ ಅಧ್ಯಕ್ಷರಾದ ಫೈಟಿ ರವಿ, ದಿನೇಶ್‌ಗೌಡ, ಗೋಪಾಲ್ ರಾಜ್, ಸ್ಮಾರ್ಟ್ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net