

ಗೋಣಿಕೊಪ್ಪಲು: ನಿವೇಶನ ರಹಿತರಿಗೆ ನಿವೇಶನ, ಹಕ್ಕುಪತ್ರ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದಿಂದ ಬೃಹತ್ ಕಾಲ್ನಡಿಗೆ ಜಾಥಾ ಸೋಮವಾರ ನಡೆಯಿತು.
ಹೈಸೊಡ್ಲೂರು ಗ್ರಾಮದಲ್ಲಿ ದಲಿತ ಸಮುದಾಯಕ್ಕೆಂದು ಗುರುತಿಸಲಾದ ಎಂಟು ಏಕರೆ ಜಾಗದಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನಿವೇಶನರಹಿತರಿಗೆ ನಿವೇಶನ ಒದಗಿಸುವಂತೆ ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಂತೆ ಘೋಷಣೆ ಕೂಗಲಾಯಿತು. ಹೈಸೊಡ್ಲೂರು ಕಾಲನಿಯಿಂದ ಆರಂಭಗೊಂಡ ಜಾಥಾ ಹುದಿಕೇರಿ, ಪೊನ್ನಂಪೇಟೆಯ ಮುಖ್ಯರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಬಳಿ ಸಮಾಪನಗೊಂಡಿತು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಪಾಂಡುರಂಗಸ್ವಾಮಿ ಮಾತನಾಡಿ, ಎಂಟು ವರ್ಷಗಳಿಂದ 8 ಎಕರೆ ಜಾಗವನ್ನು ಹೈಸೊಡ್ಲೂರು ದಲಿತ ಸಮುದಾಯಕ್ಕೆಂದು ಗುರುತಿಸಲ್ಪಟ್ಟಿದ್ದರೂ ಕೂಡ ಇದುವರೆಗೂ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಎಂಟು ಏಕರೆ ಜಾಗ ಒತ್ತುವರಿಯಾಗಿದ್ದು, ಇಲ್ಲಿನ ದಲಿತ ಸಮುದಾಯದವರಿಗೆ ನಿವೇಶನ ಒದಗಿಸದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಮೈಸೂರು ಕೊಡಗು ಜಿಲ್ಲಾ ವಿಭಾಗೀಯ ಸಂಚಾಲಕ ಎಚ್. ಎಸ್. ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೆ ದೊರೆಯುತ್ತಿದ್ದ ಟಾರ್ಪಾಲ್ ವ್ಯವಸ್ಥೆ ಕೂಡ ದೊರೆಯುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಇಂದಿನ ಪ್ರತಿಭಟನೆ ಹೋರಾಟ ಆರಂಭ ಎಂದು ಎಚ್ಚರಿಸಿದರು.
ಸಂಘಟನೆಯ ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕಿ ಭವಾನಿ ಮಾತನಾಡಿ, ಹಾಡಿ ನಿವಾಸಿಗಳು ಹಲವಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸವಾಗಿದ್ದು, ಕನಿಷ್ಠ ಶೌಚಗೃಹ ವ್ಯವಸ್ಥೆ ಕಲ್ಪಿಸಿಲ್ಲ. ಮೂಲ ಸೌಲಭ್ಯ ವಂಚಿತರಾಗಿ ಹಾಡಿ ನಿವಾಸಿಗಳು ಅತ್ಯಂತ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಟಿ.ಎನ್. ಗೋವಿಂದಪ್ಪ ಮಾತನಾಡಿ, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದಲಿತ ಸಮುದಾಯದವರಿಗೆ ನಿವೇಶನ, ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು, ತೋಟದ ಲೈನ್ ಮನೆಗಳಲ್ಲಿ ವಾಸವಿರುವ ಸಾವಿರಾರು ಕುಟುಂಬಗಳಿಗೆ ನಿವೇಶನ ಒದಗಿಸಬೇಕು ಎಂಬ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪೊನ್ನಂಪೇಟೆ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಜಾಥಾದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಚಿಕ್ಕಬಳ್ಳಾಪುರ ಕೊಡಿಗಲ್ ರಮೇಶ್, ರಾಜ್ಯ ಸಂಘಟನಾ ಸಂಚಾಲಕರಾದ ತರಿಕೆರೆ ವೆಂಕಟೇಶ್, ಚಿಕ್ಕಮಗಳೂರು ಗೋವಿಂದಪ್ಪ, ದಾವಣಗೆರೆ ಶ್ರೀನಿವಾಸ್, ಚಿತ್ರದುರ್ಗ ಪ್ರಭಾಕರ್, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್, ಜಿಲ್ಲಾ ಸಂಚಾಲಕಿ ವಾಮನಾ, ವಿರಾಜಪೇಟೆ ತಾಲೂಕು ಸಂಚಾಲಕ ನಾಗೇಶ್, ಜಿಲ್ಲಾ ಲೆಕ್ಕಪತ್ರ ಸಂಚಾಲಕ ನಿತೇಶ್ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು.