

ರಟ್ಟಿಹಳ್ಳಿ: ಸ್ವಾತಿ ಹತ್ಯೆ ಖಂಡಿಸಿ, ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡಲು ಹಾಗೂ ಯುವತಿ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಪಟ್ಟಸಾಲೆ ನೇಕಾರ ಸಮಾಜದ ವತಿಯಿಂದ ತಾಲೂಕಿನ ಮಾಸೂರ ಗ್ರಾಮದಲ್ಲಿ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಎಚ್. ಮಾತನಾಡಿ, ನೇಕಾರ ಸಮಾಜದವರು ವಸ್ತ್ರ ನೇಯ್ದು ಮಾನ ಮುಚ್ಚುವ ಕೆಲಸ ಮಾಡುತ್ತಾರೆ. ನಮ್ಮ ಸಮಾಜದ ಹೆಣ್ಣು ಮಗುವನ್ನು ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ, ದುಷ್ಕರ್ವಿುಗಳು ಹತ್ಯೆ ಮಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಿ, ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಗೆ ಕೊಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದರು.
ಗುಳೇದಗುಡ್ಡ ಗುರುಸಿದ್ಧೇಶ್ವರ ಮಠದ ಶ್ರೀ ಗುರುಬಸವ ದೇವರು ಸ್ವಾಮೀಜಿ ಮಾತನಾಡಿ, ಬಾಳಿ ಬದುಕಬೇಕಾಗಿರುವ ಒಂದು ಜೀವ ಹತ್ಯೆಯಾಗಿದೆ. ಮಗಳನ್ನು ಕಳೆದುಕೊಂಡಿರುವ ತಾಯಿಯನ್ನು ನೋಡಿದರೆ ತುಂಬಾ ನೋವಾಗುತ್ತದೆ. ರಾಜ್ಯದಲ್ಲಿ ಈ ರೀತಿ ಹತ್ಯೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ರಮೇಶ ನ್ಯಾಮತಿ ಮತ್ತು ಫಾಲಾಕ್ಷಗೌಡ್ರ ಪಾಟೀಲ ಮಾತನಾಡಿ, ಹತ್ಯೆಯಾದ ಸ್ವಾತಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ಘೊಷಣೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಸಮಾಜದ ಉಪಾಧ್ಯಕ್ಷೆ ಚೈತ್ರಾ ವಿಭೂತಿ, ನಾಗರಾಜ ರಾಮಪುರ, ವೀರಣ್ಣ ಚಿನ್ನಿಕಟ್ಟಿ, ಕರಿಬಸಪ್ಪ ಶಿಕಾರಿಪುರ, ಆನಂದ ಕಾಪನಹಳ್ಳಿ, ರಮೇಶ ರಾಣೆಬೆನ್ನೂರು, ವಿನಾಯಕ ಚಿನ್ನಿಕಟ್ಟಿ, ಶಂಕ್ರಪ್ಪ ನ್ಯಾಮತಿ, ಷಣ್ಮುಖಪ್ಪ, ಸಮಾಜದವರು ಉಪಸ್ಥಿತರದ್ದರು.