3 ದಿನ ಹೋಬಳಿ ಮಟ್ಟದಲ್ಲಿ ಅಲೆಮಾರಿಗಳ ಪ್ರತ್ಯೇಕ ಸಮೀಕ್ಷೆಗೆ ಒತ್ತಾಯ

Published on

ಶಿವಮೊಗ್ಗ: ಟೆಂಟು ಮತ್ತು ಗುಡಿಸಲುಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ 3 ದಿನ ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ಪ್ರಶ್ನಾವಳಿ ರೂಪಿಸಿ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಒತ್ತಾಯಿಸಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕ ಸದಸ್ಯ ಆಯೋಗವು ಈಗಾಗಲೇ ಸಮೀಕ್ಷೆ ನಡೆಸುತ್ತಿದೆ. ಈ ವೇಳೆ ಪೂರಕ ಮಾಹಿತಿ ನೀಡಿ ಸಹಕರಿಸುವಂತೆ ಹಾಗೂ ಸಮೀಕ್ಷೆಯಲ್ಲಿ ಮೂಲಜಾತಿ ಹೆಸರನ್ನು ಕಡ್ಡಾಯವಾಗಿ ದಾಖಲಿಸುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಈಗಾಗಲೇ ಗುರುತಿಸಲ್ಪಟ್ಟ 51 ಜಾತಿಯ 25 ಲಕ್ಷಕ್ಕೂ ಅಧಿಕ ಜನರಿಗೆ, ನಿರ್ದಿಷ್ಟ ವಿಳಾಸವೂ ಇಲ್ಲ. ಸರ್ಕಾರ ನಿಗದಿಪಡಿಸಿರುವ ಕನಿಷ್ಟ ದಾಖಲೆಗಳೂ ಇಲ್ಲ. ಅಲೆಮಾರಿ ಬುಡಕಟ್ಟು ಸಮುದಾಯಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅವಕಾಶ ವಂಚಿತರಾಗಿವೆ ಎಂದರು.

ಇಂದಿಗೂ ಅಭಿವೃದ್ಧಿಯಿಂದ ದೂರ ಉಳಿದು ಸಮಾಜದಲ್ಲಿ ಅಗೋಚರವಾಗಿ ಬದುಕಿದ್ದಾರೆ. ಮೂಲ ಜಾತಿ ಹೇಳಲು ಹಿಂಜರಿಯುತ್ತಿದ್ದಾರೆ. ಸಮುದಾಯಗಳು ಅಲೆಮಾರಿತನವನ್ನು ಮೈಗೂಡಿಸಿಕೊಂಡಿವೆ. ಹಾಗಾಗಿ ಸೂಕ್ಷ್ಮ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸಬೇಕೆಂದು ಆಯೋಗಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಅಲೆಮಾರಿಗಳು ಇಂದಿಗೂ ಆಧಾರ್ ಕಾರ್ಡ್ ಹೊಂದಿಲ್ಲ. ನಿರ್ದಿಷ್ಟ ಶಾಶ್ವತ ನೆಲೆಯಿಲ್ಲದ ಕಾರಣ ಊರೂರು ತಿರುಗಿ ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಸಮರ್ಪಕ ಮಾಹಿತಿ ನೀಡದೆ ಇದ್ದರೆ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆರೋಗ್ಯ, ಕೃಷಿ, ತೋಟಗಾರಿಕ, ಕೈಗಾರಿಕೆ, ವಾಣಿಜ್ಯ ಪಶುಸಂಗೋಪನೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಇದರ ಪರಿಣಾಮದಿಂದ ಅಲೆಮಾರಿ ಜನಾಂಗದ ಮುಂದಿನ ಪೀಳಿಗೆ ಶತಮಾನಗಳವರೆಗೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮನೆ-ಮನೆ ಜಾತಿ ಸಮೀಕ್ಷೆಯಲ್ಲಿ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸುವಂತೆ ಮನವಿ ಮಾಡಿದರು.

ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರಾದ ಹಾಲೇಶಪ್ಪ, ಸಂದೀಪ್, ಎಂ.ಆರ್.ಮಾರುತಿ, ತಿಪ್ಪೇಶ್, ಬಸವೇಶ್, ಅಶೋಕ, ಜಗ್ಗು, ಪ್ರಸನ್ನ, ಶೇಷಪ್ಪ, ರಾಘವೇಂದ್ರ ಜೋಗಿಹಳ್ಳಿ, ರವಿ, ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net