

ಬೆಂಗಳೂರು ಗ್ರಾಮಾಂತರ: ಕಳೆದ ಒಂದೂ ಮುಕ್ಕಾಲು ವರ್ಷ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕರೊನಾ ಮೊದಲ ಹಾಗೂ ಎರಡನೇ ಅಲೆಯ ನಂತರ ಇದೀಗ ಒಮಿಕ್ರಾನ್ ಎಂಬ ಹೊಸ ಪ್ರಭೇದದ ರೂಪದಲ್ಲಿ ಪ್ರತ್ಯಕ್ಷವಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮತ್ತೆ ಅಡಕತ್ತರಿಯಲ್ಲಿ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಲಾಕ್‌ಡೌನ್ ೋಷಿಸಬಹುದು ಎಂಬ ಆತಂಕ ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಶಾಲಾ- ಕಾಲೇಜು ಆಡಳಿತ ಮಂಡಳಿಗಳು ಬಾಕಿ ಶುಲ್ಕ ಪಾವತಿಸುವಂತೆ ಒತ್ತಡ ಹೇರಲಾರಂಭಿಸಿವೆ.
ಕಳೆದ ಎರಡೂ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕದ ಬಗ್ಗೆ ಪಾಲಕರು ಹಾಗೂ ಮಂಡಳಿಗಳ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಶುಲ್ಕ ಪಾವತಿಸದ ಹಲವು ಮಕ್ಕಳಿಗೆ ಕೆಲವು ಶಾಲೆಗಳು ಪರೀಕ್ಷೆಗೆ ಪ್ರವೇಶಪತ್ರ ನೀಡಲೂ ಸತಾಯಿಸಿದ್ದವು. ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಯಾವ ಶಾಲೆ ಆಡಳಿತ ಮಂಡಳಿಗಳೂ ಪಾಲಕರಿಗೆ ಒತ್ತಡ ಹೇರಬಾರದು. ಶುಲ್ಕ ಪಾವತಿಗೆ ಕಾಲಾವಕಾಶ ನೀಡಬೇಕು. ಪ್ರವೇಶಪತ್ರ ನೀಡಿ ಪರೀಕ್ಷೆಗೆ ಹಾಜರಾಗಲು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ಸೂಚಿಸಿತ್ತು. ಶಾಲೆ ಪುನರಾರಂಭದ ಬಳಿಕವೂ ಶುಲ್ಕ ಪಾವತಿಸದ ಮಕ್ಕಳನ್ನು ಶಾಲೆಗೆ ಸೇರಿಸದೆ ಹೊರಗೆ ಕೂರಿಸಿದ ಪ್ರಕರಣಗಳು ಕಂಡುಬಂದಿದ್ದವು. ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಬಿಕ್ಕಟ್ಟು ಶಮನಗೊಳಿಸಿತ್ತು. ಇದೀಗ ಮತ್ತೆ ಇಂಥದ್ದೇ ಪ್ರಕರಣಗಳು ಪುನಾರವರ್ತನೆಯಾಗುತ್ತಿವೆ. ಶಿಕ್ಷಣ ಇಲಾಖೆಗೆ ಸಾಕಷ್ಟು ದೂರುಗಳು ಬರಲಾರಂಭಿಸಿವೆ.
ಕಂತಿನಲ್ಲಿ ಪಾವತಿಸಿ: ಖಾಸಗಿ ಶಾಲೆಗಳು ವರ್ಷಕ್ಕೆ ಮೂರು ಕಂತಿನಂತೆ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಿವೆ. ಮೊದಲ ಕಂತು ಪಾವತಿಸಿರುವ ಪಾಲಕರು ಜನವರಿಯಲ್ಲಿ ಎರಡನೇ ಕಂತು ಹಾಗೂ ಮಾರ್ಚ್ ಅಂತ್ಯದಲ್ಲಿ ಮೂರನೇ ಕಂತು ಪಾವತಿಸಬೇಕಿದೆ. ಆದರೆ ಒಮಿಕ್ರಾನ್ ಹರಡುತ್ತಿದ್ದಂತೆ ಶಾಲಾ-ಕಾಲೇಜು ಆಡಳಿತ ಮಂಡಳಿಗಳು, ಮತ್ತೊಮ್ಮೆ ಲಾಕ್‌ಡೌನ್ ಭೀತಿಯಲ್ಲಿ ಪೂರ್ಣ ಶುಲ್ಕ ಪಾವತಿಗೆ ಒತ್ತಡ ಹೇರಲಾರಂಭಿಸಿವೆ. ಶುಲ್ಕ ಪಾವತಿಸದಿದ್ದರೆ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರವೇಶಪತ್ರ ನೀಡುವುದಿಲ್ಲ ಎಂಬ ಬೆದರಿಕೆ ಹಾಕುತ್ತಿವೆ. ಕರೊನಾ ಲಾಕ್‌ಡೌನ್‌ನಿಂದ ಇನ್ನೂ ಚೇತರಿಸಿಕೊಳ್ಳದ ಪಾಲಕರು ಈ ಒತ್ತಡದಿಂದ ಹೈರಾಣಾಗಿದ್ದಾರೆ. ಹಲವು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಪಾಲಕರ ಸಭೆ ಕರೆಯಲಾಗುತ್ತಿದ್ದು, ಶುಲ್ಕ ಪಾವತಿಗೆ ಒತ್ತಡ ತರಲಾಗುತ್ತಿದೆ. ಇದು ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರ ನಡುವೆ ಹಗ್ಗಾಜಗ್ಗಾಟಕ್ಕೆ ಕಾರಣವಾಗಿದೆ.
ಕಡೆಯಲ್ಲಿ ಸಮವಸ ಮಾಫಿಯಾ:ಶೈಕ್ಷಣಿಕ ವರ್ಷದ ಮುಕ್ಕಾಲು ಪಾಲು ಕಳೆದುಹೋಗಿದೆ. ಇನ್ನು ನಾಲ್ಕೈದು ತಿಂಗಳಲ್ಲಿ ಹಾಲಿ ಶೈಕ್ಷಣಿಕ ವರ್ಷವೇ ಮುಗಿಯಲಿದೆ. ಆದರೆ ಕೆಲವು ಶಾಲಾ-ಕಾಲೇಜುಗಳಲ್ಲಿ ಸಮವಸ ಖರೀದಿಗೆ ಒತ್ತಡ ಹೆಚ್ಚಾಗುತ್ತಿದೆ. ಒಮಿಕ್ರಾನ್ ಸುದ್ದಿ ಹರಡುತ್ತಿದ್ದಂತೆ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿರುವ ಶಾಲಾ ಆಡಳಿತ ಮಂಡಳಿಗಳು, ಕೂಡಲೇ ಸಮವಸ ಖರೀದಿಸಬೇಕು. ಇಲ್ಲವಾದರೆ ಶಾಲೆಗೆ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಕೀತು ಮಾಡುತ್ತಿರುವ ಆರೋಪಗಳು ಸಾಮಾನ್ಯವಾಗಿವೆ.
ಈ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಬಂದಿಲ್ಲ. ಏಕಾಏಕಿ ಶಾಲಾ ಶುಲ್ಕ ಪಾವತಿಗೆ ಒತ್ತಡ ಹೇರುವುದು ಸರಿಯಲ್ಲ. ಸಾರ್ವಜನಿಕ ವಲಯದಲ್ಲಿ ಇಂಥ ದೂರುಗಳು ಹೆಚ್ಚಾಗಿವೆ. ಲಿಖಿತ ದೂರು ಬಂದರೆ ಕೂಡಲೇ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಂಗಮಾರೇಗೌಡ, ಡಿಡಿಪಿಐ