ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಂಜೂರಿಗೆ ಆಗ್ರಹ: ಮನ್‌ಮುಲ್ ನಿವೃತ್ತ ನೌಕರರ ಪ್ರತಿಭಟನೆ

mysore
Published on

ಮೈಸೂರು: ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಂಜೂರು ಮಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.


ನಗರದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿ ಎದುರು ಜಮಾವಣೆಗೊಂಡ ನಿವೃತ್ತ ನೌಕರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
1995ರಲ್ಲಿ ಕೇಂದ್ರ ಸರ್ಕಾರವು ಇಪಿಎಫ್ ಕಾಯ್ದೆಗೆ ತಿದ್ದುಪಡಿ ತಂದು ಕುಟುಂಬ ಪಿಂಚಣಿ ಯೋಜನೆ ಬದಲಿಗೆ ಇಪಿಎಫ್ ಕಾಯ್ದೆ ಜಾರಿಗೆ ತಂದಿದೆ. ಆರಂಭದಲ್ಲಿ ದೇಶಾದ್ಯಂತ ಸುಮಾರು 24 ಸಾವಿರಕ್ಕೂ ಹೆಚ್ಚು ನಿವೃತ್ತರಿಗೆ ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಂಜೂರು ಮಾಡಿತು. ಬಳಿಕ ಕೆಲ ವರ್ಷ ಪಾವತಿಸಿ ಕೆಲವರಿಗೆ ನಿಲ್ಲಿಸಿ ಪಕ್ಷಪಾತ ಮಾಡಿದೆ ಎಂದು ಕಿಡಿಕಾರಿದರು.


ಇಪಿಎಫ್ ಟ್ರಸ್ಟ್‌ಗಳ ಮೂಲಕ ನೌಕರರ ವಾಸ್ತವ ವೇತನದ ಮೇಲಿನ ಇಪಿಎಫ್ ಪಿಂಚಣಿ ಕೊಡಲು ಬರುವುದಿಲ್ಲ ಎಂದು 2017ರಲ್ಲಿ ಸುತ್ತೋಲೆ ಹೊರಡಿಸಿತು. ಈ ಧೋರಣೆ ಪ್ರಶ್ನಿಸಿ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಇಪಿಎಫ್ ಕಾಯ್ದೆಗೆ ತಂದ ತಿದ್ದುಪಡಿಯನ್ನು ರದ್ದುಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


280 ನಿವೃತ್ತ ನೌಕರರು, ಸೇವಾನಿರತ ನೌಕರರು ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ಮಂಡ್ಯ ಹಾಲು ಒಕ್ಕೂಟ ಅನುಮೋದನೆ ನೀಡಿತ್ತು. ಆದರೆ, ಏಳೆಂಟು ತಿಂಗಳಾದರೂ ಸೇವೆಯಲ್ಲಿರುವ ಸುಮಾರು 15 ನೌಕರರಿಗೆ ವ್ಯತ್ಯಾಸ ಮೊತ್ತ ಪಾವತಿ ಮಾಡಿಲ್ಲ. ಬಳಿಕ ಒಬ್ಬ ನಿವೃತ್ತನಿಗೂ ಬೇಡಿಕೆ ಪತ್ರ ನೀಡಿಲ್ಲ. ಈ ಕುರಿತು ಹಲವು ಬಾರಿ ವಿಚಾರಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.


ನಿವೃತ್ತರಾದ ನಮ್ಮ ಕುಟುಂಬ ನಿರ್ವಹಣೆಗೆ ಇಪಿಎಫ್ ಆಧಾರವಾಗಿದ್ದು, 2022ರ ಸುಪ್ರೀಂ ಕೋರ್ಟ್ ಆದೇಶದ ಅನುಸಾರ 2 ವಾರಗಳ ಒಳಗೆ ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಬಿ.ಜಿ.ಪೂವಯ್ಯ, ಕಾರ್ಯದರ್ಶಿ ವಿ.ನಾಗರಾಜ್ ಸೇರಿದಂತೆ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net