

ಶ್ರೀರಂಗಪಟ್ಟಣ: ವೇತನ ವಿಳಂಬ ವಿರೋಧಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರು ವಲಯ ಅರಣ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ಕುಳಿತ 15ಕ್ಕೂ ಹೆಚ್ಚು ನೌಕರರು ಆರ್‌ಎಫ್‌ಒ ಅನಿತಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಘೋಷಣೆ ಕೂಗಿದರು. ದಿನಗೂಲಿ ನೌಕರರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ದಿನಗೂಲಿ ನೌಕರರ ಒಟ್ಟು 4 ಲಕ್ಷ ರೂ. ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು. ಶೀಘ್ರವೇ ನೌಕರರ ವೇತನ ನೀಡದಿದ್ದಲ್ಲಿ ಕಾನೂನಾತ್ಮಕ ಹೋರಾಟ ಆರಂಭಿಸಲಾಗುವುದು ಎಂದರು.
ನಂತರ ನಡೆದ ಸಂಧಾನ ಸಭೆಯಲ್ಲಿ ಆರ್‌ಎಫ್‌ಒ ಅನಿತಾ ಮಾತನಾಡಿ, ಸರ್ಕಾರ ದಿನಗೂಲಿ ನೌಕರರಿಗೆ ವೇತನ ನಿಗದಿಪಡಿಸಿಲ್ಲ. ಬಾಕಿ ಉಳಿಸಿಕೊಂಡಿರುವ ವೇತನವನ್ನು 8 ದಿನಗಳ ಒಳಗೆ ಸಂಪೂರ್ಣ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ನೌಕರರು ಪ್ರತಿಭಟನೆ ಹಿಂಪಡೆದರು.
ಮುಖಂಡರಾದ ತುಳಸಿಕುಮಾರ್, ಸರೋಜಮ್ಮ, ಮಧುಕುಮಾರ್, ಮರಿಗೌಡ, ಸ್ವಾಮಿಗೌಡ, ಚಿಕ್ಕಣ್ಣ, ಗೋವಿಂದಯ್ಯ ಸೇರಿದಂತೆ ಹಲವು ನೌಕರರು ಹಾಜರಿದ್ದರು.