

ಬೇಲೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಒಳ ಮೀಸಲಾತಿ ವಿಚಾರಣಾ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಮರು ಪರಿಶೀಲಿಸಿ ಜಾರಿ ಮಾಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ರಸ್ತೆ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿ ಅಲ್ಲಿಯೂ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮುಖಂಡ ಹಾಗೂ ಪುರಸಭೆ ಸದಸ್ಯ ಸಿ.ಎನ್.ದಾನಿ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ದುರುದ್ದೇಶದಿಂದ ಅನ್ಯಾಯವೆಸಗಿ ಶೋಷಿಸುತ್ತಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಒಳ ಮಿಸಲಾತಿಯನ್ನು ಮರು ಪರಿಶೀಲಿಸಿ ನ್ಯಾಯ ನೀಡವುದಕ್ಕೆ ಮುಂದಾಗಬೇಕು. ಅಲ್ಲದೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿಯ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೇ, ಬಲಗೈಗೆ ಸೇರಿದ ಇನ್ನೂ ಹಲವು ಜಾತಿಗಳನ್ನು ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಉದ್ದೇಶಪೂರ್ವಕವಾಗಿ ಸಮುದಾಯದ ಸಂಖ್ಯೆಯನ್ನು ಹೆಚ್ಚು ಮಾಡಿದ್ದಾರೆ. ಇದರೆ ಜತೆಗೆ ಜಾತಿಯೇ ಅಲ್ಲದ ಆದಿರ್ಕಾಟಕ, ಆದಿ ದ್ರಾವಿಡ, ಆದಿ ಆಂದ್ರ ಸಮೂಹಕ್ಕೆ ಮೀಸಲಾತಿ ನಿಗದಿ ಪಡಿಸಿರುವುದನ್ನು ರದ್ದು ಪಡಿಸಬೇಕು. ಅಲ್ಲದೆ ಸಮೀಕ್ಷೆಯಲ್ಲಿ ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸದ ಕಾರಣ ಈಗ ಸಂಗ್ರಹಿಸಿರುವ ದತ್ತಾಂಶ ದೃಢೀಕರಿಸಲು ಕಾಲವಕಾಶ ನೀಡಿ ಆಕ್ಷೇಪಗಳನ್ನು ತಂತ್ರಾಂಶದ ಮೂಲಕ ಆಹ್ವಾನಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ. ಈ ಸಮೀಕ್ಷೆಯಲ್ಲಿ ತಾಂತ್ರಿಕ ದೋಷವಿರುವುದರಿಂದ ಮತ್ತು ಮೀಸಲಾತಿ ಹಂಚಿಕೆಗೆ ಸಚಿವ ಸಂಪುಟದ ಉಪ ಸಮಿತಿ ಉಪ ಸಮಿತಿ ರಚಿಸಿ ಸಮೀಕ್ಷೆ ಮರುಪರೀಲನೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪ್ತಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ತಾಲೂಕು ಛಲವಾದಿ ಮಹಸಭಾ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರದಲ್ಲಿರುವ ಛಲವಾದಿ ಸಮುದಾಯದ ಸಚಿವರುಗಳು ನಿದ್ರೆಯಿಂದ ಎದ್ದು ಸಮೀಕ್ಷೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸಮೀಕ್ಷೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ರಾಜ್ಯದಲ್ಲಿ ಛಲವಾದಿ ಸಮುದಾಯ ಜಾಸ್ತಿ ಇದ್ದರೂ ಒಳ ಮಿಸಲಾತಿ ನೀಡುವಲ್ಲಿ ಛಲವಾದಿ ಸಮುದಾಯಕ್ಕೆ ಮೋಸವಾಗಿದೆ. ಮುಖ್ಯಮಂತ್ರಿಗಳು ಮರು ಪರಿಶೀಲನೆ ನಡೆಸಿ ನಮ್ಮ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಭದ್ರತೆಗೆ ಸಹಕರಿಸಬೇಕಿದೆ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಚಂದ್ರು, ಉಪಾಧ್ಯಕ್ಷ ಕೌರಿ ಕುಮಾರ್, ಮುಖಂಡರಾದ ಎನ್.ಯೋಗೀಶ್, ತೀರ್ಥೇಶ್, ದೇವರಾಜು ಮುತ್ತಗನ್ನೆ, ಬಸವರಾಜು, ರಾಯಪುರ ರವಿ, ಸತೀಶ್, ಗಂಗರಾಜು, ಶೆಟ್ಟಿಗೆರೆ ರಘು, ಸಂಜಯ್, ಮಂಜುನಾಥ್, ಲಿಖಿತ್ ರಾವಣ, ಉಮೇಶ್ ಸೇರಿದಂತೆ ಇತರರಿದ್ದರು.