

ಶಿವಮೊಗ್ಗ: ಬೆಂಗಳೂರಿನಲ್ಲಿ ಬುಧವಾರ ಐಪಿಎಲ್ ವಿಜಯೋತ್ಸವ ವೇಳೆ ನಡೆದ ಅವಘಡದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಡಾ. ಜಿ.ಪರಮೇಶ್ವರ ತಕ್ಷಣವೇ ರಾಜೀನಾಮೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
11 ಜನರ ಧಾರುಣ ಸಾವು ಸಾಮಾನ್ಯ ಸಂಗತಿಯಲ್ಲ. ಭದ್ರತಾ ವೈಫಲ್ಯ ಮತ್ತು ಕೆಟ್ಟ ಸರ್ಕಾರದ ಅಪಚಾರದಿಂದ ಸಂಭವಿಸಿದೆ. ಇದು ಕಾಂಗ್ರೆಸ್ ಸರ್ಕಾರದ ನೀಚತನದ ಪರಮಾವಧಿ ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಕಪ್ ಗೆದ್ದಾಗಲೇ ಜನರು ಉನ್ಮಾದದ ಸ್ಥಿತಿಗೆ ತಲುಪಿದ್ದರು. ಇದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅರ್ಥ ಮಾಡಿಕೊಳ್ಳದೇ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ, ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ವಿಜಯೋತ್ಸವಕ್ಕೆ ಲಕ್ಷಾಂತರ ಜನರು ಸೇರುತ್ತಾರೆ ಎಂಬುದನ್ನು ಅಂದಾಜಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಅದಕ್ಕೆ ಬಾರೀ ದಂಡ ತೆರಬೇಕಾಯಿತು ಎಂದರು.
ಸರ್ಕಾರ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದರೆ ಈ ಅವಘಡ ಸಂಭವಿಸುತ್ತಲೇ ಇರಲಿಲ್ಲ. ತರಾತರಿಯಲ್ಲಿ ವಿಧಾನಸೌಧದ ಎದುರು ಕಾರ್ಯಕ್ರಮ ಆಯೋಜನೆ ಮಾಡಿತ್ತು. ಅಲ್ಲೂ ಜನಸಂದಣಿ ಹೆಚ್ಚಿತ್ತು. ಅಲ್ಲಿ ಆರ್‌ಸಿಟಿ ಆಟಗಾರರಿಗೆ ಸನ್ಮಾನ ಮಾಡಿದರೋ ಅಥವಾ ಅವಮಾನ ಮಾಡಿದರೋ ಗೊತ್ತೇ ಆಗಲಿಲ್ಲ. ಸಚಿವರು, ಅಧಿಕಾರಿಗಳ ಮಕ್ಕಳು, ಕುಟುಂಬಸ್ಥರನ್ನು ಕರೆದುಕೊಂಡು ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬಿಟ್ಟರೆ ಬೇರೆ ಯಾವು ಉದ್ದೇಶವೂ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.