ವಕ್ಪ್ ಕಾನೂನು ರದ್ದುಗೊಳಿಸಲು ಆಗ್ರಹ

Demand for repeal of WAKF law
Published on

ಹಾನಗಲ್ಲ: ರೈತರ ಜಮೀನು ಮತ್ತು ಮಠ-ಮಂದಿರಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಪ್ ಕಾನೂನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕ ಪಟ್ಟಣದಲ್ಲಿ ತಹಸೀಲ್ದಾರ್ ಎಸ್.ರೇಣುಕಾ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಿಸಾನ್ ಸಂಘದ ಸದಸ್ಯರು, ವಕ್ಪ್​ನಿಂದ ಮಠ-ಮಂದಿರಗಳನ್ನು ಕಾಪಾಡಿ, ರೈತರ ಜಮೀನು ಉಳಿಯಲಿ, ವಕ್ಪ್ ಮಂಡಳಿಯ ಭೂ ಅತಿಕ್ರಮಣ ನಿಲ್ಲಲಿ, ವಕ್ಪ್ ಸಚಿವರನ್ನು ವಜಾಗೊಳಿಸಿ, ವಕ್ಪ್ ಮಂಡಳಿ ರದ್ದಾಗಲಿ ಎಂಬ ಘೊಷಣೆ ಕೂಗಿದರು. ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ರೈತರ ಸಾವಿರಾರು ಎಕರೆ ಭೂಮಿ, ಮಠ, ಮಂದಿರ ಸೇರಿದಂತೆ ಮನೆಗಳನ್ನೂ ವಕ್ಪ್ ಆಸ್ತಿಗಳೆಂದು ಪಹಣಿಯಲ್ಲಿ ದಾಖಲಿಸಲಾಗಿದೆ. ರಾಜ್ಯಾದ್ಯಂತ ಕಂದಾಯ ಇಲಾಖೆ ಅಧಿಕಾರಿಗಳು ಆಸ್ತಿಗಳನ್ನು ವಕ್ಪ್ ಹೆಸರಿಗೆ ವರ್ಗಾಯಿಸಿ ನೋಟೀಸ್ ಜಾರಿ ಮಾಡುತ್ತಿದ್ದಾರೆ. ವಿರೋಧದ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ನೋಟೀಸ್ ಮರಳಿ ಪಡೆಯಲಾಗುತ್ತಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಯಾವುದೇ ನೋಟೀಸ್ ನೀಡದೇ ವಕ್ಪ್ ಆಸ್ತಿ ಎಂದು ನಮೂದಿಸಲಾಗಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ರಾಜ್ಯ ಸರ್ಕಾರ ಕೂಡಲೇ ವಕ್ಪ್ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ಜಿಲ್ಲಾ ಉಪಾಧ್ಯಕ್ಷ ಸುನೀಲಕುಮಾರ ಬಂಕಾಪುರ, ತಾಲೂಕು ಅಧ್ಯಕ್ಷ ಬಸವಣ್ಣೆಯ್ಯ ಸಾಲಿಮಠ, ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ನಿಂಬನಗೌಡ್ರ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಬೀರನವರ, ಉಪಾಧ್ಯಕ್ಷ ನಾಗಣ್ಣ ಬೆಳ್ಳಿಗಟ್ಟಿ, ಪದ್ಮನಾಭ ಕುಂದಾಪುರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಾಲತೇಶ ಕೊಪ್ಪದ, ಓಂಪ್ರಕಾಶ ಸೊಲಬಣ್ಣನವರ, ಮಹೇಶ ಹವಳಣ್ಣನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net