

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೌಡಳ್ಳಿ ಸಕಲೇಶಪುರ ರಸ್ತೆ ತುಂಬ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಪುರಸಭೆ ವ್ಯಾಪ್ತಿಯ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿದರು.
ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಕೌಡಳ್ಳಿ ಮತ್ತು ಪಟ್ಟಣದ ನಡುವಿನ ರಸ್ತೆ ಪ್ರಮುಖ ಸಂಚಾರ ಮಾರ್ಗವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಹೊರವರ್ತುಲ ರಸ್ತೆ ಕಾಮಗಾರಿ ಪ್ರಾರಂಭಿಸಿದ ಬಳಿಕ ಹಳೆಯ ರಸ್ತೆ ನಿರ್ಲಕ್ಷ್ಯಕ್ಕೆ ಒಳಪಟ್ಟಿತು. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ಮತ್ತೆ ದುರಸ್ತಿಪಡಿಸಬೇಕಿತ್ತು. ಆದರೆ ಯಾವುದೇ ಇಲಾಖೆ ಈ ಬಗ್ಗೆ ಗಮನ ಹರಿಸದ ಕಾರಣ ರಸ್ತೆ ತುಂಬ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಡಕಾಗಿದೆ ಎಂದು ಪ್ರತಿಭಟನಾಕಾರರು ಅಲವತ್ತುಕೊಂಡರು.
ಈ ರಸ್ತೆ ಮೂಲಕ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕೌಡಳ್ಳಿ ಜೆಎಸ್‌ಎಸ್ ವಿದ್ಯಾಸಂಸ್ಥೆ, ಬುದ್ಧಿಮಾಂದ್ಯರ ಶಾಲೆ ಹಾಗೂ ಪಟ್ಟಣದ ವಿವಿಧ ಕಾಲೇಜುಗಳಿಗೆ ತೆರಳುತ್ತಾರೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಸಂಚರಿಸಲು, ಜನರು ನಡೆದಾಡಲು ಸಹ ಅಸಾಧ್ಯವಾಗಿದೆ. ಮಕ್ಕಳು ಮತ್ತು ವಾಹನ ಸವಾರರು ಅಪಾಯದ ನಡುವೆಯೇ ಸಂಚರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಸಮಸ್ಯೆ ತೋಡಿಕೊಂಡರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಮಾಡುವ ವೇಳೆ ಗ್ರಾಮಸ್ಥರು ಹಾಗೂ ಪಟ್ಟಣ ನಿವಾಸಿಗಳ ಅನುಕೂಲವನ್ನು ಪರಿಗಣಿಸದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಾರೆ. ಈ ದುಸ್ಥಿತಿಗೆ ಅವರೇ ಹೊಣೆಗಾರರು. ಹಲವು ಬಾರಿ ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಬಳಿಕ ಸಂಬಂಧಿಸಿದವರು ಸ್ಥಳಕ್ಕೆ ಬಂದು ಅಹವಾಲು ಆಲಿಸದ ಕಾರಣ ಪ್ರತಿಭಟನಾಕಾರರು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚಿ ಪುನರ್‌ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಬೇಡಿಕೆ ಈಡೇರಿಸದಿದ್ದರೆ ರಸ್ತೆ ಸಂಚಾರ ತಡೆದು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಕೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಯ್ಯ, ರಮೇಶ್, ಕುಮಾರ್, ಕಂಟ್ರಾೃಕ್ಟರ್ ರಮೇಶ್, ಭಾಸ್ಕರ್ ನಾಯ್ಡು, ಕಾಳಯ್ಯ, ಸಂದೇಶ್, ಮೋಹನ್ ಕುಮಾರ, ಗಣೇಶ್, ದೇವಪ್ಪ, ಚಂದ್ರಶೇಖರ್ ಮತ್ತು ಕುಮಾರಸ್ವಾಮಿ ಮೊದಲಾದವರು ಭಾಗವಹಿಸಿದ್ದರು.