

ಮದ್ದೂರು: ಪಟ್ಟಣದಿಂದ ಚನ್ನಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಕೆಮ್ಮಣ್ಣು ನಾಲೆಯ ಪಕ್ಕದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗುಂಡಿಯಿಂದ ಕೂಡಿರುವ ರಸ್ತೆಯ ಬಳಿ ಜಮಾಯಿಸಿದ ಸ್ಥಳೀಯರು, ರಸ್ತೆ ಸರಿಪಡಿಸದ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಈ ರಸ್ತೆ ಮದ್ದೂರು ಪಟ್ಟಣದಿಂದ ಚನ್ನಸಂದ್ರ, ಗೊರವನಹಳ್ಳಿ, ಸೋಂಪುರ ಹಾಗೂ ಮಾಲಗರನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ. ಜತೆಗೆ ಟ್ರ್ಯಾಕ್ಟರ್, ಕಬ್ಬು ತುಂಬಿದ ಲಾರಿಗಳು ಹಾಗೂ ಎತ್ತಿನಗಾಡಿ ಸೇರಿದಂತೆ ಹಲವಾರು ವಾಹನಗಳು ಸಂಚಾರ ಮಾಡಲಿದ್ದು, ರಸ್ತೆ ಸರಿಯಿಲ್ಲದ ಪರಿಣಾಮ ರೈತರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಕಾವೇರಿ ನೀರಾವರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆ ಮೇಲೆ ಬಂದು ಇಲ್ಲಿಯ ಸಮಸ್ಯೆಗಳನ್ನು ನೋಡುತ್ತಿಲ್ಲ. ರಸ್ತೆ ಸರಿಯಿಲ್ಲದ ಕಬ್ಬನ್ನು ಕಾರ್ಖಾನೆಗೆ ಸಾಗಣೆ ಮಾಡಲು ಆಗುತ್ತಿಲ್ಲ. ಇದರಿಂದ ಕಬ್ಬು ಜಮೀನಿನಲ್ಲೇ ಒಣಗುತ್ತಿದೆ. ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡು ರಸ್ತೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ರೈತರ ಜತೆಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಜಗದೀಶ್, ಸುದೀಪ್, ರವಿ ಹಾಗೂ ರಾಘವೇಂದ್ರ ಇದ್ದರು.