ನಗರ ಪ್ರವೇಶ ನಿಷೇಧ ತೆರವಿಗೆ ಆಗ್ರಹ

29 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ಅವಳಿನಗರಗಳಲ್ಲಿ ಇಂಡಿಯನ್​ ಆಯಿಲ್​ ಹಾಗೂ ಹಿಂದುಸ್ತಾನ್​ ಪೆಟ್ರೋಲಿಯಂ ವಾಹನಗಳ ಪ್ರವೇಶ ನಿಷೇಧಿಸಿದ್ದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಐಒಸಿಎಲ್​ ಹಾಗೂ ಎಚ್​ಪಿಸಿಎಲ್​ ಟ್ರಾನ್ಸಪೋರ್ಟ್​ರ್​ ಕಾಂಟ್ರ್ಯಾಕ್ಟರ್ಸ್​ ಅಸೋಸಿಯೇಶನ್​ ನಡೆಸುತ್ತಿರುವ ಧರಣಿ 2 ದಿನ ಪೂರೈಸಿದೆ.
ತೈಲ ಟ್ಯಾಂಕರ್​ಗಳು ಅವಳಿನಗರದಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಪ್ರವೇಶಿಸದಂತೆ ಸರ್ಕಾರ ನಿಷೇಧ ಹೇರಿದೆ. ಈ ನಿಷೇಧದಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಸರಿಯಾದ ಸಮಯಕ್ಕೆ ತೈಲ ಸರಬರಾಜು ಆಗುತ್ತಿಲ್ಲ. ಹೀಗಾಗಿ ಕೂಡಲೇ ಈ ನಿಷೇಧ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಅಗತ್ಯ ವಸ್ತುಗಳಲ್ಲಿ ಸೇರಿರುವ ಪೆಟ್ರೋಲ್​ ಮತ್ತು ಡೀಸೆಲ್​ ಅನ್ನು ಅವಳಿನಗರ ಮಧ್ಯದ ರಾಯಾಪುರ ಬಳಿ ಭರ್ತಿ ಮಾಡಲಾಗುತ್ತಿದೆ. ಧಾರವಾಡ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಬೆಳಗಾವಿ, ರಾಯಚೂರ, ಗದಗ, ಬಳ್ಳಾರಿ, ಕೊಪ್ಪಳ, ವಿಜಯಪುರ, ಕಾರವಾರ ಸೇರಿ ಇತರ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರವೇಶ ನಿಷೇಧದಿಂದ ಸಮಸ್ಯೆಯಾಗಿದೆ. ಕಂಪನಿಗಳಲ್ಲಿ ತೈಲ ಭರ್ತಿ ಆರಂಭವಾಗುವುದೇ ಬೆಳಗ್ಗೆ. ಈ ಅವಧಿಯಲ್ಲೇ ನಿಷೇಧ ಮಾಡಿದ್ದಾರೆ. ಇನ್ನು ಕಂಪನಿ ನಿಯಮ ಪ್ರಕಾರ ರಾತ್ರಿ ಅವಧಿಯಲ್ಲಿ ಟ್ಯಾಂಕರ್​ ಓಡಿಸಿದರೆ ದಂಡ ಬೀಳಲಿದೆ. ಹೀಗಾಗಿ ತೈಲ ಸಬರಾಜು ಮಾಡುವುದೇ ಕಷ್ಟಸಾಧ್ಯವಾಗಿದೆ ಎಂದು ದೂರಿದರು.
ಸ್ಮಾರ್ಟ್​ ಸಿಟಿ ಕಾಮಗಾರಿ ಹೆಸರಿನಲ್ಲಿ ಟ್ಯಾಂಕರ್​ಗಳ ಪ್ರವೇಶ ನಿಷೇಧಿಸಲಾಗಿದೆ. ನಿಷೇಧದಿಂದ ಟ್ಯಾಂಕರ್​ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಟ್ಯಾಂಕರ್​ಗಳ ಸಂಚಾರ ಬಂದ್​ ಮಾಡಿದ್ದೇವೆ. ಸರ್ಕಾರ ನಿಷೇಧ ತೆರವು ಮಾಡುವವರೆಗೂ ಧರಣಿ ನಡೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸೋಸಿಯೇಶನ್​ನ ಅಕ್ಷಯ ಪಟ್ಟಣಶೆಟ್ಟಿ, ಅರ್ಜುನ ಕುರಂದವಾಡ, ರಾಜು ನಾಯ್ಕರ, ರಾಕೇಶ ಪಟ್ಟಣಶೆಟ್ಟಿ, ಸಿದ್ರಯ್ಯ ಪಾದನಕಟ್ಟಿ, ರಫೀಕ್​ ಕಲಕೇರಿ, ರಾವೇಂದ್ರ ಗೌಡರ, ಪಿ.ಬಿ.ಮಮದಾಪುರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net