ಪಿಎಂ ಫಸಲ್ ಬಿಮಾ ಯೋಜನೆ ಹಣ ಬಿಡುಗಡೆಗೆ ಆಗ್ರಹ

3hgr1
Published on

ಹಲಗೂರು: ಫಸಲ್ ಬಿಮಾ ಯೋಜನೆಯಡಿ ರೈತರಿಗೆ ವಿಮಾ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶನಿವಾರ ಹಲಗೂರಿನ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಯಿತು.


ಯೋಜನೆಯ ಹೆಸರಲ್ಲಿ ಖಾಸಗಿ ವಿಮಾ ಕಂಪನಿಗಳಿಗೆ ಸರ್ಕಾರ ಹಾಗೂ ರೈತರ ಹಣವನ್ನು ದೋಚಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮೊದಲಿಗೆ ಬೆಳೆ ನಷ್ಟ ಹೊಂದಿದ ರೈತರಿಗೆ ಈ ವಿಮಾ ಯೋಜನೆಯಲ್ಲಿ ಪರಿಹಾರ ನೀಡಲು ನಿಗದಿಪಡಿಸಿರುವ ಮಾನದಂಡವೇ ರೈತ ವಿರೋಧಿಯಾಗಿದೆ. ಬೆಳೆ ನಷ್ಟ ಹೊಂದಿದ ರೈತರು ಪ್ರತ್ಯೇಕವಾಗಿ ವಿಮಾ ಮೊತ್ತ ಪಡೆಯಲು ಸಾಧ್ಯವಿಲ್ಲ. ಬದಲಾಗಿ ಇಡೀ ತಾಲೂಕು, ಬ್ಲಾಕ್ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದರೆ ಮಾತ್ರ ವಿಮೆ ಮಾಡಿಸಿರುವ ರೈತನಿಗೆ ಪರಿಹಾರ ದೊರೆಯುತ್ತದೆ ಎಂದು ಅಸಮಾಧಾನ ವ್ಯಕ್ತಪಪಡಿಸಿದರು.


ಬರಗಾಲ ಘೋಷಣೆಯಾಗಿ ಹಲವಾರು ತಿಂಗಳೇ ಕಳೆದರೂ ಸಹ ಫಸಲ್ ಬಿಮಾ ಯೋಜನೆ ಅಡಿ ಮಳವಳ್ಳಿ ತಾಲೂಕಿನ ರಾಗಿ ಬೆಳೆದ ರೈತರು ಸೇರಿದಂತೆ ಇತರ ಬೆಳೆಗಳಿಗೆ ವಿಮಾ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ಈ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ರೈತರಿಗೆ ತಕ್ಷಣ ವಿಮಾ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಉಪ ತಹಸೀಲ್ದಾರ್ ಸುನೀಲ್ ಮೂಲಕ ಜಿಲ್ಲಾಧಿಕಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷರಾದ ಮಹಾದೇವು ಮಾರಗೌಡನಹಳ್ಳಿ, ನಾರಾಯಣಗೌಡ ಕೊನ್ನಾಪುರ, ಹಲಗೂರು ಪ್ರಮೀಳಾ, ಗೊಲ್ಲರಹಳ್ಳಿ ಗಣೇಶ್, ಬೆನಮನಹಳ್ಳಿ ಲಿಂಗರಾಜ, ರವಿಗೌಡ, ತಮ್ಮಣ್ಣಗೌಡ, ಮಹಾದೇವು, ನಾಗೇಶ, ವಂದ್ರಿ ಬಾಬಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ತಿಮ್ಮೇಗೌಡ, ಶಿವಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net