

ಹುಣಸೂರು: ಹಾಲು ಉತ್ಪಾದಕರಿಗೆ ಸರ್ಕಾರ ಕಳೆದ ಎಂಟು ತಿಂಗಳುಗಳಿಂದ ಸಹಾಯಧನ ನೀಡದಿರುವ ಕ್ರಮ ಖಂಡಿಸಿ ರೈತಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಳೆದ 8 ತಿಂಗಳುಗಳಿಂದ ರಾಜ್ಯ ಸರ್ಕಾರ ರೈತರಿಗೆ ನೀಡಬೇಕಿದ್ದ ಸಹಾಯಧನ ಬಿಡುಗಡೆ ಮಾಡದೇ ರೈತರನ್ನು ಕಡೆಗಣಿಸುತ್ತಿದೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಉತ್ಪಾದನಾ ವೆಚ್ಚವು ಇಂದಿನ ದರಗಳಲ್ಲಿ ಲಾಭದಾಯಕವಾಗಿಲ್ಲ. ಅಲ್ಲದೆ ಗ್ರಾಹಕರಿಗೆ ಬೆಲೆ ಹೆಚ್ಚು ಮಾಡಬಾರದೆಂಬ ಕಾರಣಕ್ಕಾಗಿ ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನವನ್ನು ಕಡಿಮೆ ಮಾಡಿರುವುದು ಖಂಡನೀಯ. ಸರ್ಕಾರವು ಸಹಾಯಧನ ಬಿಟ್ಟು ವೈಜ್ಞಾನಿಕ ಬೆಲೆಯ ಮೂಲಕ ಖರೀದಿ ಮಾಡುವ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿ ಲೀಟರ್‌ಗೆ 15 ರೂಪಾಯಿ ಸಹಾಯಧನವನ್ನು ಕೊಡಬೇಕೆಂದು ಒತ್ತಾಯಿಸಿದರು.
ಬಾಕಿ ಉಳಿಸಿಕೊಂಡಿರುವ ಸಹಾಯಧನವನ್ನು ತಾರತಮ್ಯ ನೀತಿ ಅನುಸರಿಸದೇ ಸಾಮೂಹಿಕವಾಗಿ ಉತ್ಪಾದಕರಿಗೆ ಮಂಜೂರು ಮಾಡಬೇಕು. ಹೈನುಗಾರಿಕೆ ನಡೆಸುತ್ತಿರುವವರು ಶೇ.95 ಭಾಗ ಬಡವರಾಗಿರುತ್ತಾರೆ. ಪಶು ಆಹಾರ ವೆಚ್ಚವೂ ದುಬಾರಿಯಾಗಿರುವುದರಿಂದ ಉತ್ಪಾದಕರಿಂದ ಹಾಲನ್ನು ಹೆಚ್ಚು ಬೆಲೆಗೆ ಖರೀದಿಸುವಂತೆ ಕ್ರಮ ಕೈಗೊಂಡು ಹಾಲು ಉತ್ಪಾದಕರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಜಿಲ್ಲಾ ಉಪಾಧ್ಯಕ್ಷ ಆಲಿಜಾನ್, ಜಿಲ್ಲಾ ಖಜಾಂಚಿ ಈಶ್ವರ್, ಜಿಲ್ಲಾ ಪದಾಧಿಕಾರಿ ಬಸವರಾಜೇಗೌಡ ಹಾಗೂ ತಾಲೂಕಿನ ಪದಾಧಿಕಾರಿಗಳು ಹಾಜರಿದ್ದರು. ತಹಸೀಲ್ದಾರ್ ಜೆ.ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.