

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿ ಪಾವತಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದ್ದಾರೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ವಿಶ್ವವಿದ್ಯಾಲಯದ ಸಿಬ್ಬಂದಿಗೆ ಪಿಂಚಣಿ ನೀಡಲು ಸರ್ಕಾರದಿಂದ ಅನುದಾನ ಬಿಡುಗಡೆ ಆಗಿರುವುದಿಲ್ಲ. ಆಂತರಿಕ ಸಂಪನ್ಮೂಲವೂ ಇರುವುದಿಲ್ಲ. ಹೀಗಾಗಿ ಸಿಬ್ಬಂದಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯದ 2ನೇ ಹಳೆಯ ವಿಶ್ವವಿದ್ಯಾಲಯವಾಗಿರುವ ಕವಿವಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಳೆದ 3 ವರ್ಷಗಳಿಂದ ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳ ಮೂಲಕ ಪಿಂಚಣಿ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಭಾಯಿಸಿದೆ. ಆದರೆ, ಈಗ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಅನುದಾನದ ಇಲ್ಲದಿರುವುದು ಖೇದಕರ ಸಂಗತಿ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಕನೂರ ಒತ್ತಾಯಿಸಿದ್ದಾರೆ.