

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಿಂದ ಬೆಳೆಗಳು ಹಾನಿಯಾಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಬೆಳೆಗಳಾದ ಈರುಳ್ಳಿ, ಹೆಸರು, ಸೋಯಾಬಿನ್, ಹತ್ತಿ, ಉದ್ದಿನ ಬೆಳೆಗಳು ನಾಶವಾಗಿವೆ. ಬೆಳೆ ವಿಮೆ ತುಂಬಿದ್ದರೂ ಪರಿಹಾರ ನೀಡಿಲ್ಲ. ಕಳೆದ ವರ್ಷದ ಮುಂಗಾರು, ಹಿಂಗಾರು ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು. ಆಯವ್ಯಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಬಾಕಿ ಇರುವ ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ಕ್ವಿಂಟಾಲ್ ಕಡಲೆ, ಸೋಯಾಬಿನ್ ಹಾಗೂ ಹತ್ತಿಗೆ 10 ಸಾವಿರ ರೂ., ಗೋವಿನ ಜೋಳ, ಕಬ್ಬಿಗೆ 5 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರೈತರ ಹೊಲಗಳಿಗೆ ರಸ್ತೆ ನಿಮಿರ್ಸಬೇಕು. ರೈತರ ಟ್ರ್ಯಾಕ್ಟರ್ಗಳಿಗೆ ಅರ್ಧ ಬೆಲೆಯಲ್ಲಿ 2 ಸಾವಿರ ಲೀಟರ್ ಡೀಸೆಲ್ ವಿತರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವೀರನಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ರಾಚಯ್ಯ ಮಠದ, ಶಿವಪ್ಪ ಕಂಬಳಿ, ಇತರರು ಇದ್ದರು.