

ಮೈಸೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಯಿತು. ನಗರದ ಪುರಭವನ ಆವರಣದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ಚಂದ್ರಬಾಬು ನಾಯ್ಡು ಅವರ ಅಭಿಮಾನಿಗಳು, ಮೌನ ಪ್ರತಿಭಟನೆ ನಡೆಸಿದರು.
ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶ ಅಭಿವೃದ್ಧಿಯ ಪಥದಲ್ಲಿತ್ತು. ದೇಶಕ್ಕೆ ಮಾದರಿ ಯಾಗುವಂತೆ ಆಡಳಿತ ನಡೆಸಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಆಧಾರವಿಲ್ಲದಿದ್ದರೂ ಅವರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಭಿವೃದ್ಧಿ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಪ್ರತಿಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಕೆ.ಶ್ರೀನಿವಾಸ್, ಟಿ.ರಮೇಶ್, ಎಂ.ಶ್ರೀನಿವಾಸುಲು, ಮುರಳಿ ಇತರರು ಇದ್ದರು.