

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ನಗರದ ಬಸ್ ಪ್ರಯಾಣಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.
ಆದಾಯ ಕ್ರೋಢಿಕರಣಕ್ಕೆ ವಿದ್ಯುತ್, ಮುದ್ರಾಂಕ ಶುಲ್ಕ, ಮದ್ಯ, ಹಾಲಿನ ದರ ಏರಿಕೆ ನಡುವೆಯೇ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಿದ್ದರಿಂದ ಜನರು ಕಂಗಾಲಾಗಿದ್ದಾರೆ. ದರ ಏರಿಕೆ ಸಮಯದಲ್ಲಿ ಸೇವಾಮಟ್ಟ ಸುಧಾರಿಸುವ ಕ್ರಮಗಳನ್ನಾದರೂ ಪ್ರಕಟಿಸಬೇಕಾಗಿತ್ತು ಎಂದು ದೂರಿದ್ದಾರೆ.
ಬಸ್ ಟಿಕೆಟ್ ದರ ಏರಿಕೆಯಾದರೂ ಸೇವೆಯ ಮಟ್ಟದಲ್ಲಿ ಸುಧಾರಣೆ ಇಲ್ಲ. ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದರೆ ವಿಶೇಷ ಅನುದಾನ ನೀಡಲಿ. ಸರ್ಕಾರ ತನ್ನ ಆಶ್ವಾಸನೆಗಳ ಈಡೇರಿಕೆಗೆ ಕೊಡಬೇಕಾದ ಹಣವನ್ನು ಪ್ರತಿ ತಿಂಗಳೂ ನಿಗಮಗಳಿಗೆ ಕೊಡಲಿ. ಟಿಕೆಟ್ ಕೊಂಡು ಪ್ರಯಾಣಿಸುವವರಿಗೆ ಪ್ರತ್ಯೇಕ ಬಸ್ಗಳನ್ನು ಬಿಡಲಿ. ಹೊಣೆಗಾರಿಕೆ ಎಂಬುದು ಇರುವಂತಾಗಲಿ. ಜನರ ಬಳಿ ಬರಿ ಹಣ ವಸೂಲಿ ಮಾಡುವುದು ಬೇಡ. ಸಾರಿಗೆ ವ್ಯವಸ್ಥೆ ಲಾಭದ ಉದ್ದೇಶ ಹೊಂದಿರದೆ ಪ್ರಯಾಣಿಕರ ಸ್ನೇಹಿ ವ್ಯವಸ್ಥೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ವೇದಿಕೆ ಸದಸ್ಯರಾದ ಉದಯ ಯಂಡಿಗೇರಿ, ರವೀಂದ್ರ ಆಕಳವಾಡಿ, ಸುನೀಲ ಕಲಾಲ, ಈರಣ್ಣ ಆಕಳವಾಡಿ, ಮಹಾಂತೇಶ ಲಿಂಬೆಣ್ಣದೇವರಮಠ, ಆನಂದ ಸಾವಕಾರ, ಮಂಜುನಾಥ ಕಳದೂರ, ಇತರರು ಇದ್ದರು.