

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಸಕ ಬಸನಗೌಡ ಪಾಟೀಲ ಉಚ್ಚಾಟನೆಯಿಂದ ರಾಜ್ಯದ ಜನರಿಗೆ ನೋವಾಗಿದೆ. ಹೀಗಾಗಿ ಕೇಂದ್ರದ ಬಿಜೆಪಿ ಹಿರಿಯ ನಾಯಕರು ಪುನರ್ ಪರಿಶೀಲಿಸಿ ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಮಾತ್ರ ಹಿಂದುತ್ವದ ರಕ್ಷಣೆ ಎಂಬುದನ್ನು ಮೊದಲಿನಿಂದಲೂ ನಂಬಿದ್ದೇವೆ. ಬಸನಗೌಡ ಪಾಟೀಲ ಹಿಂದುತ್ವದ ಪರ ಮಾತನಾಡುವ ಗಟ್ಟಿ ಧ್ವನಿ ಹೊಂದಿರುವ ವ್ಯಕ್ತಿ. ಇದೀಗ ಉಚ್ಚಾಟನೆಯಿಂದ ಹಿಂದುಗಳಿಗೆ ನೋವಾಗುವುದು ಸಹಜ. ಹೀಗಾಗಿ ಅವರ ಉಚ್ಚಾಟನೆಯನ್ನು ಪರಿಶೀಲಿಸಿ ಪಕ್ಷ ಸಂಘಟನೆಗೆ ಅವಕಾಶ ನೀಡಬೇಕು ಎಂದರು.
ಯತ್ನಾಳ ಹೊಸ ಪಕ್ಷ ಕಟ್ಟುವುದು ಅವರ ವೈಯಕ್ತಿಕ ವಿಚಾರ. ಈ ವಿಚಾರವಾಗಿ ಅವರು ನನ್ನೊಂದಿಗೆ ಮಾತನಾಡಿಲ್ಲ. ನಿಜವಾದ ಹಿಂದುತ್ವ ದೃಷ್ಟಿ ಇದ್ದರೆ, ಅವರು ಆಹ್ವಾನಿಸಿದರೆ ಸಂಘಟನೆ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯುಗಾದಿ ಹಾಗೂ ಶ್ರೀ ರಾಮನವಮಿ ಹಬ್ಬವನ್ನು ಹಿಂದುಗಳು ಹಲಾಲ್ ಮುಕ್ತ ಆಚರಣೆ ಮಾಡಬೇಕು. ಹಲಾಲ್ ಇಸ್ಲಾಮಿಯರಿಗೆ ಸಂಬಂಧಿಸಿದ್ದು, ಬೇಕಿದ್ದರೆ ಅವರು ಮಾಡಿಕೊಳ್ಳಲಿ. ಆದರೆ ಅದನ್ನು ಹಿಂದುಗಳ ಮೇಲೆ ಹೇರುವುದು ಸರಿಯಲ್ಲ. ಕಾಯಿ, ಕರ್ಪೂರ, ಹೂವು, ಹಣ್ಣುಗಳನ್ನು ಹಲಾಲ್ ಮೂಲಕ ಮಾರುತ್ತಿದ್ದಾರೆ. ಇದನ್ನು ಹಿಂದುಗಳಿಗೆ ಅಶಾಸ್ತ್ರವಾದದ್ದು. ಹೀಗಾಗಿ ಹಿಂದುಗಳ ಜತಗೆ ವ್ಯಾಪಾರ-ವಹಿವಾಟು ನಡೆಸಿ ಹಲಾಲ್ ಮುಕ್ತ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ರಮಜಾನ್ ಸಮಯದಲ್ಲಿ ಗೋವುಗಳ ಅಕ್ರಮ ಸಾಗಾಟ ಹೆಚ್ಚಿದೆ. ಗೋ ಹತ್ಯ ನಿಷೇಧ ಕಾನೂನು ಜಾರಿಯಾಗಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣಕ್ಕೆ ಇನ್ನು 2-3 ದಿನಗಳ ಕಾಲ ಪ್ರತಿ ಚೆಕ್ಪೋಸ್ಟ್ನಲ್ಲಿ ನಮ್ಮ ಸಂಘಟನೆ ಯುವಕರು ವಾಹನಗಳ ಮೇಲೆ ನಿಗಾ ಇಡಲಿದ್ದಾರೆ. ಇದರಿಂದ ಏನಾದರೂ ಅವಘಡಗಳು ಸಂಭವಿಸಿದರೆ ಪೊಲೀಸರು ಹಾಗೂ ರಾಜ್ಯ ಸರ್ಕಾರವೇ ಕಾರಣ ಎಂದು ಎಚ್ಚರಿಸಿದರು.
ಗಂಗಾಧರ ಕುಲಕರ್ಣಿ, ಅಮೃತೇಶ, ಬಸವರಾಜ, ಇತರರು ಇದ್ದರು.